ಜಿಲ್ಲೆ

ವಾಡಿಕೆಗಿಂತ ಶೇ.81 ಜಾಸ್ತಿ ಮಳೆ

ವಿಜಯವಾಣಿ ಸುದ್ದಿಜಾಲ ಬೀದರ್

ಜಿಲ್ಲೆಯಲ್ಲಿ ಸೆ.1ರಿಂದ 23ರವರೆಗೆ ಸರಾಸರಿಗಿಂತ ಶೇ.81 ಅಧಿಕ ಮಳೆಯಾಗಿದೆ. ಆಗಸ್ಟ್ ನಲ್ಲಿ ವಾಡಿಕೆಗಿಂತ ಶೇ.18 ಮಳೆ ಕಮ್ಮಿಯಾಗಿತ್ತು. ಆದರೆ ಸೆಪ್ಟೆಂಬರ್ ಎರಡನೇ ವಾರದಿಂದ ಅಬ್ಬರಿಸಿದ ಮಳೆರಾಯ ಜಲಧಾರೆ ಹರಿಸಿದ್ದಾನೆ. ನಾಲ್ಕು ವರ್ಷದ (2016ರ ಸೆಪ್ಟೆಂಬರ್) ನಂತರದ ಅತಿವೃಷ್ಟಿಯಿಂದ ಅನೇಕ ಸಮಸ್ಯೆಗಳು ಉದ್ಭವಿಸಿವೆ. ಅನ್ನದಾತರನ್ನು ಹೈರಾಣಕ್ಕೂ ಸಿಲುಕಿಸಿವೆ.

ಸೆ.15ರಿಂದ 17ರವರೆಗೆ ಜಿಲ್ಲೆಯಲ್ಲಿ ದಾಖಲೆ ಎಂಬಂತೆ ಮಳೆ ಸುರಿದಿದೆ. ಇದರಿಂದ ಬಹುತೇಕ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ತುಂಬಿವೆ. ಕಾರಂಜಾ ಜಲಾಶಯಕ್ಕೆ ಭರಪೂರ ನೀರು ಬಂದಿದೆ. ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಸೊರಗಿದ್ದ ಬೋರ್ವೆಲ್, ತೆರೆದ ಬಾವಿಗಳು ಭರ್ತಿ ಆಗಿರುವುದು ಸಮಾಧಾನ ತಂದಿದೆ. ಆದರೆ ಇದೇ ವೇಳೆ ಜಿಲ್ಲೆಯ ಎಲ್ಲೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ 2.65 ಲಕ್ಷ ಎಕರೆಗೂ ಅಧಿಕ (1.05 ಲಕ್ಷ ಹೆಕ್ಟೇರ್) ಪ್ರದೇಶದಲ್ಲಿನ ಸಮೃದ್ಧ ಬೆಳೆಗಳು ಹಾಳಾಗಿ ರೈತ ಸಮೂಹಕ್ಕೆ ಭಾರಿ ಪೆಟ್ಟು ಕೊಟ್ಟಿದೆ.

ಆಗಸ್ಟ್ ನಲ್ಲಿ ನಾಲ್ಕೈದು ದಿನ ಸತತ ಸುರಿದ ಸಾಧಾರಣೆ ಮಳೆಯಿಂದ ಕಟಾವಿಗೆ ಬಂದಿದ್ದ 35 ಸಾವಿರ ಎಕರೆ ಹೆಸರು ಸೇರಿ 54 ಸಾವಿರ ಎಕರೆ ಬೆಳೆ ನೀರುಪಾಲಾಗಿತ್ತು. ಸೆ.15ರಿಂದ ನಾಲ್ಕು ದಿನದ ವರುಣಾರ್ಭಟದಿಂದ ಸೋಯಾಬೀನ್, ಉದ್ದು, ಕಬ್ಬು, ತೊಗರಿ ಇತರ ಬೆಳೆಗಳು ನೀರುಪಾಲಾಗಿ ರೈತರ ಗಾಯದ ಮೇಲೆ ಬರೆ ಎಳೆದಿದೆ. ಪ್ರಾಥಮಿಕ ವರದಿ ಪ್ರಕಾರ 1.05 ಲಕ್ಷ ಹೆಕ್ಟೇರ್ ಗಿಂತ ಅಧಿಕ ಬೆಳೆ ಹಾನಿಗೀಡಾಗಿದೆ. ಕಂದಾಯ, ಕೃಷಿ ಇಲಾಖೆಯಿಂದ ಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಎರಡ್ಮೂರು ದಿನದೊಳಗೆ ನಿಖರ ಮಾಹಿತಿ ಲಭ್ಯವಾಗಲಿದೆ.

ಆಗಸ್ಟ್ ನಲ್ಲಿ ಸರಾಸರಿ 191 ಮಿಮೀ ಮಳೆ ಆಗಬೇಕಿತ್ತು. ಆದರೆ 157 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.18 ಕಮ್ಮಿ ಇದೆ. ಮಳೆ ಪ್ರಮಾಣ ಕಮ್ಮಿಯಾಗಿದ್ದರೂ ಹೆಸರು ಬೆಳೆ ರಾಶಿ ಹಂತದಲ್ಲಿ ನಾಲ್ಕೈದು ದಿನ ಸತತ ಸಾಧಾರಣ ಮಳೆ ಬಿದ್ದು, ರೈತರನ್ನು ಕಷ್ಟಕ್ಕೆ ತಳ್ಳಿತ್ತು. ಇನ್ನು ಕಳೆದ ವಾರದ ಮಳೆಯು ಭಾರಿ ಪ್ರಮಾಣದ ಬೆಳೆಯನ್ನು ನೀರುಪಾಲು ಮಾಡಿದೆ. ಸೆ.1ರಿಂದ 23ರವರೆಗೆ ಸರಾಸರಿಗಿಂತ ಶೇ.81 ಜಾಸ್ತಿ ಮಳೆ ಬಿದ್ದಿದೆ. ಹುಲಸೂರು ತಾಲೂಕಿನಲ್ಲಿ ಈ ಪ್ರಮಾಣ ಶೇ.141 ಹೆಚ್ಚಿದ್ದು, ವರ್ಷಧಾರೆಗೆ ಜನರು ತತ್ತರಿಸಿದ್ದಾರೆ. ಇಲ್ಲಿ 121 ಮಿಮೀ ಮಳೆಯಾಗಬೇಕಿದ್ದು, 293 ಮಿಮೀ ಸುರಿದಿದೆ.

ಈ ಅವಧಿಯಲ್ಲಿ ಬೀದರ್ ತಾಲೂಕಿನಲ್ಲಿ ಸಾಮಾನ್ಯವಾಗಿ 138 ಮಿಮೀ ಮಳೆಯಾಗಬೇಕಿದ್ದು, 260 ಮಿಮೀ ಆಗಿದೆ. ಇದು ವಾಡಿಕೆಗಿಂತ ಶೇ.89 ಹೆಚ್ಚು. ಹಮನಾಬಾದ್ ನಲ್ಲಿ 134 ಮಿಮೀ ಪೈಕಿ 252 ಆಗಿದ್ದು, ಶೇ.88 ಅಧಿಕ. ಭಾಲ್ಕಿ ತಾಲೂಕಿನಲ್ಲಿ 137 ಮಿಮೀ ಸಾಮಾನ್ಯವಿದೆ. 253 ಮಿಮೀ ಸುರಿದಿದ್ದು, ಶೇ.84 ಜಾಸ್ತಿಯಿದೆ. ಚಿಟಗುಪ್ಪ ತಾಲೂಕಿನಲ್ಲಿ 118 ಮಿಮೀ ಆಗಬೇಕಿದ್ದ ಮಳೆ 196 ಮಿಮೀ ಸುರಿದಿದ್ದು, ಶೇ.65 ಹೆಚ್ಚಿದೆ. ಕಮಲನಗರ ತಾಲೂಕಿನಲ್ಲಿ 150 ಮಿಮೀ ಬದಲು 244 ಮಿಮೀ ಆಗಿದ್ದು, ಶೇ.62 ಅಧಿಕವಿದೆ. ಔರಾದ್ ತಾಲೂಕಿನಲ್ಲಿ 128 ಮಿಮೀ ಬದಲು 207 ಮಿಮೀ ಮಳೆಯಾಗಿದ್ದು, ಶೇ.61 ಜಾಸ್ತಿಯಿದೆ. ಬಸವಕಲ್ಯಾಣ ತಾಲೂಕಿನಲ್ಲಿ ಸಾಮಾನ್ಯ ಮಳೆ 133 ಮಿಮೀ ಇದ್ದು, 210 ಮಿಮೀ ಆಗಿದೆ. ಇದು ಶೇ.58 ಹೆಚ್ಚಿದೆ.

ಜಿಲ್ಲೆಯಲ್ಲಿ ಜೂನ್ ಆರಂಭದಿಂದ ಸೆ.23ರವರೆಗೆ ಸಾಮಾನ್ಯವಾಗಿ 613 ಮಿಮೀ ಮಳೆ ಆಗಬೇಕಿತ್ತು. ಆದರೆ 774 ಮಿಮೀ ಸುರಿದಿದೆ. ಇದು ವಾಸ್ತವಕ್ಕಿಂತಲೂ ಶೇ.26 ಅಧಿಕವಿದೆ. ಹುಲಸೂರು, ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ತಾಲೂಕುಗಳಲ್ಲಿ ಮಳೆ ಪ್ರಮಾಣ ಸರಾಸರಿಗಿಂತ ಶೇ.40 ಜಾಸ್ತಿಯಿದೆ. ಮಳೆ ಹೆಚ್ಚು ಬಂದು ನೀರಿನ ದಾಹ ನೀಗಿಸಿದ ಸಂಭ್ರಮ ತಂದಿದೆ. ಆದರೆ ರೈತರ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿರುವುದು ಸಮಸ್ಯೆ ತಂದಿಟ್ಟಿದೆ.

  • ಕಾರಂಜಾದಲ್ಲಿ 4 ಟಿಎಂಸಿ ನೀರು

ಜಿಲ್ಲೆಯ ಕಾರಂಜಾ ಜಲಾಶಯಕ್ಕೂ ಸೆಪ್ಟೆಂಬರ್ ಮಳೆ ಜೀವಕಳೆ ತಂದುಕೊಟ್ಟಿದೆ. ನಾಲ್ಕೈದು ದಿನದ ಧಾರಾಕಾರ ಮಳೆಯಿಂದ ಜಲಾಶಯದ ಒಳಹರಿವು ದಿಢೀರ್ ಹೆಚ್ಚಾಗಿದೆ. ಈ ಅವಧಿಯಲ್ಲಿ ಜಲಾಶಯಕ್ಕೆ 3 ಟಿಎಂಸಿಗೂ ಅಧಿಕ ನೀರು ಬಂದಿರುವುದು ದಾಖಲೆ. ಜಲಾಶಯವು 7.69 ಟಿಎಂಸಿ ಸಾಮಥ್ರ್ಯ ಹೊಂದಿದೆ. ಸದ್ಯ ನೀರಿನ ಸಂಗ್ರಹ 4.1 ಟಿಎಂಸಿ ಇದೆ. 2016ರಲ್ಲಿ ಜಲಾಶಯ ಪೂರ್ಣ ತುಂಬಿತ್ತು. ಇದೀಗ ಶೇ.54 ಭರ್ತಿಯಾಗಿದೆ. ಕಾರಂಜಾಗೆ ನೀರು ಬಂದಿರುವುದು ಬೀದರ್ ನಗರ, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದೆ. ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ 124 ಸಣ್ಣ ನೀರಾವರಿ ಕೆರೆಗಳ ಪೈಕಿ 76 ಭರ್ತಿಯಾಗಿವೆ. ಉಳಿದವುಗಳಲ್ಲಿ ಶೇ.75ಕ್ಕೂ ಅಧಿಕ ನೀರು ಬಂದಿದೆ. ಮಾಂಜ್ರಾ ನದಿ ಒಡಲು ಸಹ ತುಂಬಿ ಹರಿಯುತ್ತಿದೆ.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ವ್ಯಾಪಕ ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದೆ. ಸಮಗ್ರ ಸಮೀಕ್ಷೆ ನಡೆಯುತ್ತಿದೆ. ರಸ್ತೆ, ಸೇತುವೆ, ವಿದ್ಯುತ್ ಕಂಬ ಇತರ ಅಗತ್ಯ ಮೂಲಸೌಕರ್ಯಗಳ ಹಾನಿಯಿಂದಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಮಾರ್ಗಸೂಚಿ ಪ್ರಕಾರ ರೈತರಿಗೆ ಪರಿಹಾರ ನೀಡುವ ಕೆಲಸ ಸರ್ಕಾರ ಮಾಡಲಿದೆ.| ರಾಮಚಂದ್ರನ್ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ಹಾನಿ ಸಂಬಂಧ ಸಮೀಕ್ಷೆ ನಡೆದಿದ್ದು, ಶೀಘ್ರವೇ ಮುಗಿಯಲಿದೆ. ಪ್ರಾಥಮಿಕ ವರದಿ ಪ್ರಕಾರ 1 ಲಕ್ಷ ಹೆಕ್ಟೇರ್ಗಿಂತ ಅಧಿಕ ಪ್ರದೇಶದಲ್ಲಿನ ಸೋಯಾಬೀನ್, ತೊಗರಿ, ಉದ್ದು, ಕಬ್ಬು ಇತರ ಬೆಳೆಗಳು ನಷ್ಟವಾಗಿವೆ. ಸಮೀಕ್ಷೆ ಪೂರ್ಣಗೊಂಡ ನಂತರ ನಿಖರ ಮಾಹಿತಿ ಸಿಗಲಿದ್ದು, ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. | ತಾರಾಮಣಿ, ಜಂಟಿ ಕೃಷಿ ನಿರ್ದೇಶಕಿ