ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಎದುರು ವಾಟರ್‌ಮನ್‌ಗಳು ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸುರೇಶ್, ಚಂದ್ರಶೇಖರ್ ಮತ್ತು ಸಿಬ್ಬಂದಿ ಇದ್ದರು.  
ಜಿಲ್ಲೆ

ವಾಟರ್‌ಮನ್‌ಗಳಿಗೆ ಸಂಬಳ ನೇರ ಪಾವತಿಸಿ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಕಳೆದ 25 ವರ್ಷಗಳಿಂದ ವಾಟರ್ ಮನ್‌ಗಳು ಕೆಲಸ ಮಾಡುತ್ತಿದ್ದರೂ ಸರ್ಕಾರ ಕಾಯಂ ಮಾಡದೆ ಗುತ್ತಿಗೆದಾರರ ಮೂಲಕ ಸಂಬಳ ನೀಡಲಾಗುತ್ತಿದೆ. ಇದನ್ನು ಕೈ ಬಿಟ್ಟು ವಾಟರ್‌ಮನ್‌ಗಳಿಗೆ ನೇರವಾಗಿ ಸಂಬಳ ನೀಡುವ ಪದ್ಧತಿ ಜಾರಿಯಾಗಬೇಕು ಎಂದು ತಾಲೂಕು ವಾಟರ್‌ಮನ್ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದರು.

ಮಂಗಳವಾರ ಪಟ್ಟಣ ಪಂಚಾಯಿತಿ ಎದುರು ವಾಟರ್‌ಮನ್‌ಗಳು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮಾತನಾಡಿ, ರಾಜ್ಯಾದ್ಯಂತ ವಾಟರ್‌ಮನ್‌ಗಳ ಮುಷ್ಕರ ಪ್ರಾರಂಭವಾಗಿದೆ. ಈಗಿನ ಪದ್ಧತಿಯಂತೆ ಸರ್ಕಾರವು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀರಿನ ಜವಾಬ್ದಾರಿ ವಹಿಸಲಾಗುತ್ತಿದೆ. ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದಿಲ್ಲ. ಆದ್ದರಿಂದ ಪೌರ ಕಾರ್ಮಿಕರಂತೆ ನಮ್ಮನ್ನೂ ಕಾಯಂ ಉದ್ಯೋಗಿಗಳನ್ನಾಗಿ ಮಾಡಬೇಕು. ಅದು ಆಗದಿದ್ದರೆ ಗುತ್ತಿಗೆ ಕೊಡುವುದನ್ನು ಕೈಬಿಟ್ಟು ಪಟ್ಟಣ ಪಂಚಾಯಿತಿಯಿಂದಲೇ ನೇರವಾಗಿ ನಮಗೆ ಸಂಬಳ ಪಾವತಿಸುವ ಪದ್ಧತಿ ಜಾರಿಗೆ ತರಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಲೂಕು ವಾಟರ್‌ಮನ್ ಸಂಘದ ಅಧ್ಯಕ್ಷ ಸುರೇಶ್, ಎಲ್ಲ ವಾಟರ್‌ಮನ್‌ಗಳು ಭಾಗವಹಿಸಿದ್ದರು.