ಜಿಲ್ಲೆ

ವಾಜಮಂಗಲದ ಬಸ್ ನಿಲ್ದಾಣಕ್ಕೆ ಜೈ ಭೀಮ್ ಹೆಸರಿಡುವಂತೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ವಾಜಮಂಗಲದ ಬಸ್ ನಿಲ್ದಾಣಕ್ಕೆ ಜೈ ಭೀಮ್ ಬಸ್ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಸೇರಿದ ಸದಸ್ಯರು, ಭಿತ್ತಿಪತ್ರ ಪ್ರದರ್ಶಿಸಿ ತಮ್ಮ ಬೇಡಿಕೆಯನ್ನು ಮಂಡಿಸಿದರು. ನಾಲ್ಕೈದು ವರ್ಷಗಳ ಹಿಂದೆ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ.

ಇದೀಗ ಈ ನಿಲ್ದಾಣಕ್ಕೆ ಪುನೀತ್‌ರಾಜ್‌ಕುಮಾರ್ ಎಂದು ಹೆಸರು ಹಾಕಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ. ಇದು ಕಾನೂನು ಬದ್ಧವಾಗಿದೆಯೇ? ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಿಲ್ದಾಣಕ್ಕೆ ಪುನೀತ್‌ರಾಜ್‌ಕುಮಾರ್ ಹೆಸರು ತೆಗೆದು ಜೈಭೀಮ್ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ವಿ.ಪಿ.ಸುಶೀಲಾ, ಪುಟ್ಟರಾಜು, ಸುದರ್ಶನ್, ಈಶ್ವರ್, ಅಮೀನಾಬೇಗಂ, ಭಾಗ್ಯಮ್ಮ, ಸಮೀರ್ ರೈ, ಗೌರಮ್ಮ, ಲತಾಕುಮಾರ್ ಇದ್ದರು.