ವಿಜಯಪುರ: ಮಾಜಿ ಪ್ರಧಾನಿ, ಭಾರತ ರತ್ನ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಇಂದು ಬಸವನಾಡು ವಿಜಯಪುರದಲ್ಲಿ ವಾಜಪೇಯಿ ಹೆಸರಿನ ರಸ್ತೆಯನ್ನು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ವಿಜಯಪುರ ನಗರದ ಗಾಂಧಿಚೌಕ್ ದಿಂದ ಹೊಸದಾಗಿ ನಿರ್ಮಾಣವಾದ 1.9ಕಿಲೋ ಮೀಟರ್ ಸಿಸಿ ರಸ್ತೆಗೆ ಅಟಲ್ ಬಿಹಾರಿ ವಾಜಪೇಯಿ ಎಂದು ನಾಮಕರಣ ಮಾಡಲಾಗಿದ್ದು, 6 ಅಡಿ ಎತ್ತರದ ಕಟ್ಟೆಯ ಮೇಲೆ ನಿರ್ಮಿಸಲಾದ 6 ಅಡಿ ಎತ್ತರದ 400 ಕೆಜಿ ತೂಕದ ವಾಜಪೇಯಿ ಅವರ ಕಂಚಿನ ಮೂರ್ತಿ ಲೋಕಾರ್ಪಣೆ ಮಾಡಲಾಯಿತು. ಇನ್ನು ಈ ಮೂರ್ತಿ ರಾಜಸ್ಥಾನದ ಜೈಪುರದಲ್ಲಿ ಈ ಮೂರ್ತಿ ನಿರ್ಮಾಣಕ್ಕೆ 6.50 ಲಕ್ಷ ರೂ. ವೆಚ್ಚವಾಗಿದೆ. ಮೂರ್ತಿ ಪ್ರತಿಷ್ಠಾಪಿಸಿರುವ ಕಟ್ಟೆ 2.80 ಲಕ್ಷ ರೂ. ಖರ್ಚಾಗಿದೆ. ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ, ಈಗ ವಿಜಯಪುರ ನಗರ ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಇದರ ಸಂಪೂರ್ಣ ವೆಚ್ಚವನ್ನು ಭರಿಸಿದ್ದಾರೆ.