ಜಿಲ್ಲೆ

ವಾಜಗದ್ದೆ ಸಿರಿ ಸ್ಮರಣ ಸಂಚಿಕೆ ಲೋಕಾರ್ಪಣೆ 15ರಂದು

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ದೇವಸ್ಥಾನದಲ್ಲಿ ‘ಶ್ರೀದುರ್ಗಾವಿನಾಯಕ ದೇವರ ಸನ್ನಿಧಿಯಲ್ಲಿ ವಾಜಗದ್ದೆ ಸಿರಿ’ ಸ್ಮರಣ ಸಂಚಿಕೆ ಲೋಕಾರ್ಪಣೆ, ಕೃತಜ್ಞತಾ ಸಮರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಫೆ.15ರಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಮೊಕ್ತೇಸರ ಪಿ.ವಿ.ಹೆಗಡೆ ಹೊಸಗದ್ದೆ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 2019ರ ಏಪ್ರಿಲ್ 19ರಂದು ಶ್ರೀ ದುರ್ಗಾವಿನಾಯಕ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯ ಲೋಕಾರ್ಪಣೆ ಶ್ರೀ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದಿತ್ತು. ದೇವಸ್ಥಾನ ಪುನರ್ ನಿರ್ವಣಕ್ಕೆ ಸುಮಾರು 75 ಲಕ್ಷ ರೂ. ಗಳಷ್ಟು ವೆಚ್ಚವಾಗಿದ್ದು ಇದರಲ್ಲಿ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಕೆಲಸವನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಮಾಡಿದ್ದಾರೆ. ದೇಗುಲದ ಅಭಿವೃದ್ಧಿಗೆ ಸಹಕಾರ ನೀಡಿದವರೆಲ್ಲರಿಗೂ ಕೃತಜ್ಞತೆಯನ್ನು ಅಂದು ಸಲ್ಲಿಸಲಿದ್ದೇವೆ. ಅಲ್ಲದೆ, ‘ವಾಜಗದ್ದೆ ಸಿರಿ’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಾಗುತ್ತಿದೆ. ನಾಗರಾಜ ಮತ್ತಿಗಾರ ಅವರು ಈ ಸ್ಮರಣ ಸಂಚಿಕೆ ಕಾರ್ಯವನ್ನು ಆರು ಜನ ಸಂಪಾದಕೀಯ ಮಂಡಳಿ ಸದಸ್ಯರ ಸಹಕಾರದಿಂದ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ದೇವಸ್ಥಾನದ ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಲ್ಮನೆ ಮಾತನಾಡಿ, ಫೆ.15ರಂದು ಸಂಜೆ 4.30ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ ಹೆಗಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಚಿವ ಶಿವರಾಮ ಹೆಬ್ಬಾರ, ವಿಪ ಸದಸ್ಯ ಎಸ್.ಎಲ್. ಘೊಟ್ನೇಕರ್ ಪಾಲ್ಗೊಳ್ಳಲಿದ್ದಾರೆ. ಪ್ರಮೋದ ಹೆಗಡೆ ಯಲ್ಲಾಪುರ ಅಭಿನಂದನಾ ನುಡಿ ಆಡಲಿದ್ದಾರೆ. ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ರಾಮಕೃಷ್ಣಹೆಗಡೆ ಕಡವೆ, ಜಿ.ಎಸ್. ಭಟ್ಟ ಕಲ್ಲಾಳ, ಎಸ್.ಪಿ.ಶೇಷಗಿರಿ ಭಟ್ಟರು ಸಿಗಂದೂರು, ವಿ.ಆರ್.ಹೆಗಡೆ ಅತ್ತಿಮುರುಡು, ಸುಬ್ರಾಯ ಮತ್ತಿಹಳ್ಳಿ, ಜಿ.ಆರ್.ಹೆಗಡೆ ಹಾರ್ಸಿಮನೆ, ಸುಧೀರ ಗೌಡರ್ ಹೆಗ್ಗೋಡಮನೆ, ದತ್ತಾತ್ರೇಯ ಜೋಶಿ ವಾಜಗದ್ದೆ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ನಂತರ ಮೂರು ಮುತ್ತು ಖ್ಯಾತಿಯ ನಾಟಕ ತಂಡದವರಿಂದ ಮಿಸ್ಟರ್ ಪಾಪಾ ಪಾಂಡು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.