ಮೈಸೂರು: ವಾಕ್ ಮತ್ತು ಶ್ರವಣ ತೊಂದರೆಯ ಲಕ್ಷಣಗಳನ್ನು ಗುರುತಿಸಲು ಮತ್ತು ಆರಂಭಿಕ ಹಂತಗಳಲ್ಲಿ ಅವುಗಳನ್ನು ಪತ್ತೆಹಚ್ಚಲು ಅವಕಾಶವಿದೆ. ಇದರಿಂದ ಬಳಲುತ್ತಿರುವರೊಂದಿಗೆ ಸಮಾಜ ಸಹಕಾರ ಮತ್ತು ಸಹಾನುಭೂತಿಯಿಂದ ವರ್ತಿಸಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಅಂಗವಿಕಲರಿಗೆ ಅಡೆತಡೆ ಇಲ್ಲದ ವಾತಾವರಣ ಸೃಷ್ಟಿಸುತ್ತಿದೆ. ಇದರಿಂದ ಅವರು ಯಾವುದೇ ತೊಂದರೆ ಇಲ್ಲದೆ ತಮ್ಮ ಜೀವನದಲ್ಲಿ ಮುಂದುವರಿಯಬಹುದು.
‘ಸುಗಮ್ಯ ಭಾರತ ಅಭಿಯಾನ’ ಅಡಿಯಲ್ಲಿ ಇವರ ಪ್ರಗತಿಗೆ ಸಮಾನ ಅವಕಾಶ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲ ಸಾರ್ವಜನಿಕ ಸ್ಥಳಗಳು, ಸೌಲಭ್ಯಗಳು ಮತ್ತು ಮಾಹಿತಿ ಮೂಲಗಳು ಅಂಗವಿಕಲರ ಸ್ನೇಹಿಯಾಗಿರಬೇಕು. ಇದು ಅವರಿಗೆ ಅನುಕೂಲ ಕಲ್ಪಿಸುವುದಲ್ಲದೆ, ಸಮಾಜವು ತಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಅವರಿಗೆ ಅನಿಸಬೇಕು ಎಂದರು.
ದೇಶದಲ್ಲಿ ಆರು ಕೋಟಿ ಜನರು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿವುಡುತನ ತಡೆಗಟ್ಟುವಿಕೆ, ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ನೋಡಲ್ ಕೇಂದ್ರವಾಗಿ ಆಯಿಷ್‌ಗೆ ದೊಡ್ಡ ಜವಾಬ್ದಾರಿ ಇದೆ ಎಂದು ರಾಷ್ಟ್ರಪತಿ ಹೇಳಿದರು.
1965ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಪರಿಣಿತ ಮಾನವಶಕ್ತಿಯ ಸಹಾಯದಿಂದ ಸಂವಹನ ಅಸ್ವಸ್ಥತೆ ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಾಕ್-ಶ್ರವಣ ಸಂಬಂಧಿತ ಅಂಗವೈಕಲ್ಯಗಳಿಂದ ಬಳಲುತ್ತಿರುವ ಎಲ್ಲ ವಯೋಮಾನದ ಜನರಿಗೆ ಇಲ್ಲಿ ಬಹುಶಿಸ್ತಿನ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸಂಸ್ಥೆಯ ಔಟ್‌ರೀಚ್ ಕೇಂದ್ರಗಳು, ಟೆಲಿ-ಮೌಲ್ಯಮಾಪನ ಮತ್ತು ಟೆಲಿ-ಪುನರ್ವಸತಿ ಸೇವೆಗಳು ದೇಶಾದ್ಯಂತ ಅಗತ್ಯ ಇರುವವರಿಗೆ ಸಹಾಯ ಮಾಡುತ್ತಿವೆ ಎಂದರು.
ಕಳೆದ ವರ್ಷ ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಕ್ಷೇತ್ರದಲ್ಲಿ 2024ರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯಿಷ್‌ಗೆ ‘ಪುನರ್ವಸತಿ ವೃತ್ತಿಪರರ ಅಭಿವೃದ್ಧಿಯಲ್ಲಿ ತೊಡಗಿರುವ ಅತ್ಯುತ್ತಮ ಸಂಸ್ಥೆ’ ಪ್ರಶಸ್ತಿಯನ್ನು ನೀಡುವ ಅವಕಾಶ ನನಗೆ ಸಿಕ್ಕಿತು. ಈ ಗೌರವವು ಈ ಸಂಸ್ಥೆಯು ಮಾಡುತ್ತಿರುವ ಉತ್ತಮ ಕಾರ್ಯಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಭಾರತ ಸಂಸ್ಥೆಯಾಗಿ ಇದು ಭಾರತ, ವಿದೇಶಗಳಲ್ಲಿನ ಸಂಸ್ಥೆಗಳಿಗೆ ಮಾದರಿಯಾಗಲು ನಿರಂತರವಾಗಿ ಪ್ರಯತ್ನ ಮಾಡಬೇಕು. ಸಂಸ್ಥೆಯಿಂದ ಸ್ಥಾಪಿಸಲಾದ ಇನ್‌ಕ್ಲೂಸಿವ್ ಥೆರಪಿ ಪಾರ್ಕ್ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂವಹನ ಅಸ್ವಸ್ಥತೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
‘ಆಯಿಷ್ ಆರೋಗ್ಯವಾಣಿ’ ಸಂವಹನ ಅಸ್ವಸ್ಥತೆಗಳು ಮತ್ತು ಅವುಗಳ ಆರಂಭಿಕ ಗುರುತಿಸುವಿಕೆಯ ಬಗ್ಗೆ ಅರಿವು ಮೂಡಿಸಲು ವಿನ್ಯಾಸಗೊಳಿಸಲಾದ ಒಂದು ವಿಶಿಷ್ಟ ಉಪಕ್ರಮ. ದೇಶದ ಪ್ರಮುಖ ಸಂಸ್ಥೆಯಾಗಿರುವ ಇದು ಸಂವಹನ ಅಸ್ವಸ್ಥತೆಗಳಿಗೆ ಸಂಬಂಧಿಸಿದ ರಾಷ್ಟ್ರೀಯ ನೀತಿ ನಿರೂಪಣೆಯಲ್ಲೂ ಸಲಹೆ ನೀಡಬಹುದು ಎಂದು ತಿಳಿಸಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತಿರುವ ತಂತ್ರಜ್ಞಾನ ಬಳಕೆಯು ವಾಕ್ ಮತ್ತು ಶ್ರವಣ ಸಮಸ್ಯೆ ನಿವಾರಣೆಗೆ ಸಹಾಯಕವಾಗಿದೆ ಎಂಬುದು ಸಾಬೀತಾಗಿದೆ. ಆದರೆ ತಂತ್ರಜ್ಞಾನ ಮತ್ತು ಸಾಧನಗಳು ಸಾಮಾನ್ಯ ಜನರನ್ನು ತಲುಪಲು ದೇಶದಲ್ಲೇ ಅವುಗಳ ಅಭಿವೃದ್ಧಿ, ಉತ್ಪಾದನೆ ಅಗತ್ಯ
ಉದಾಹರಣೆಗೆ, ಕಾಕ್ಲಿಯರ್ ಇಂಪ್ಲಾಂಟ್‌ಗಳಂತಹ ಸಾಧನಗಳು ಕಡಿಮೆ ವೆಚ್ಚದಲ್ಲಿ ಲಭ್ಯವಿರಬೇಕು. ಇದರಿಂದ ನಾವು ಅವುಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು. ಆಯಿಷ್‌ನಂತಹ ಸಂಸ್ಥೆಗಳು ಈ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಈ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಉತ್ತೇಜಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ನಿಮ್ಮ ಕೊಡುಗೆಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ಕಿವಿಮಾತು ಹೇಳಿದರು.
ಆಯಿಷ್ ಇಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸಿದೆ. ಇದರಿಂದಾಗಿ ಅದು ದೇಶದ ಅಂಗವಿಕಲ ಮಾನವ ಸಂಪನ್ಮೂಲ ಸಬಲೀಕರಣಗೊಳಿಸುವಲ್ಲಿ ಹೆಚ್ಚಿನ ಕೊಡುಗೆ ನೀಡುತ್ತದೆ.
ಶಿಕ್ಷಣ ತಜ್ಞರು, ವೈದ್ಯರು, ತಾಂತ್ರಿಕ ತಜ್ಞರು, ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದರೊಂದಿಗೆ ಅಂಗವಿಕಲ ಮಾನವ ಸಂಪನ್ಮೂಲವನ್ನು ಸಶಕ್ತಗೊಳಿಸಲು ಇದು ಕೆಲಸ ಮಾಡುತ್ತದೆ. ದೇಶ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಈ ಕೆಲಸದಲ್ಲಿ ತೊಡಗಿಸಿಕೊಂಡಿರುವುದೂ ಸಕಾರಾತ್ಮಕ ಹೆಜ್ಜೆ. ಅಂಗವಿಕಲರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿರುವ ನವೋದ್ಯಮವನ್ನೂ ಇದು ಬೆಂಬಲಿಸಬೇಕು ಎಂದು ಸಲಹೆ ನೀಡಿದರು.
ಇಂತಹ ಸಂಸ್ಥೆಗಳು ಸಹಾನುಭೂತಿಯಿಂದ ಉತ್ಸಾಹದಲ್ಲಿ ಕೆಲಸ ಮಾಡಬೇಕು. ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು. ಇದರಿಂದ ವಾಕ್-ಶ್ರವಣದೋಷದಿಂದ ಬಳಲುತ್ತಿರುವವರು ಸಹ ಜನಸಾಮಾನ್ಯರಂತೆ ಜೀವನ ನಡೆಸಬಹುದು. ಅವರು ಸಹ ಸಮಾಜ ಮತ್ತು ಆರ್ಥಿಕತೆಗೆ ತಮ್ಮ ಅತ್ಯುತ್ತಮ ಕೊಡುಗೆ ನೀಡಬಹುದು ಎಂದರು.
ಕಳೆದ ಸುಮಾರು 2 ದಶಕಗಳಿಂದ ಈ ಸಂಸ್ಥೆಯನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ. ಈ ಸಂಸ್ಥೆ ‘ಮಹಿಳಾ ನೇತೃತ್ವದ ಅಭಿವೃದ್ಧಿ’ಗೆ ಉತ್ತಮ ಉದಾಹರಣೆಯಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಮೈಸೂರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಅವರು ದಾನ ನೀಡಿದ ಭೂಮಿಯಲ್ಲಿ ಆಯಿಷ್ ಕ್ಯಾಂಪಸ್ ನಿರ್ಮಾಣವಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪೂರ್ವಜರು ಮಾಡಿದ ಸಮಾಜ ಕಲ್ಯಾಣ ಕಾರ್ಯಗಳನ್ನು ಪ್ರಶಂಸಿಸುತ್ತೇನೆ ಎಂದರು.
ಸೆ.23ರಂದು ವಿಶ್ವ ಸಂಕೇತ ಭಾಷಾ ದಿನವನ್ನು ಆಚರಿಸುವ ಉದ್ದೇಶ ಸಂಕೇತ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು. ಸಂಕೇತ ಭಾಷೆ ಹೆಚ್ಚು ಸಮೃದ್ಧಗೊಳಿಸಲು ಈ ದಿನವನ್ನು ಸಂಕಲ್ಪ ದಿನವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಇದ್ದರು.