ಜಿಲ್ಲೆ

ವಾಂತಿ-ಭೇದಿಯಿಂದ 12 ಮಂದಿ ಅಸ್ವಸ್ಥ


ಚಿತ್ರದುರ್ಗ: ತಾಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾರದಿಂದ ಈವರೆಗೆ 12 ಮಂದಿ ಅಸ್ವಸ್ಥರಾಗಿದ್ದು, ಜಿಪಂ ಸಿಇಒ ಸೋಮಶೇಖರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಡಿಎಚ್‌ಒ, ಟಿಎಚ್‌ಒ, ತಾಲೂಕು ಆಡಳಿತ, ತಾಪಂ, ಗ್ರಾಪಂ ನೇತೃತ್ವದ ತಂಡ ಬೀಡು ಬಿಟ್ಟಿದೆ. ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ. ಧೈರ್ಯದಿಂದಿರಿ ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ ಆ. 5ರಿಂದಲೂ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಪೈಪ್‌ಲೈನ್ ಸೋರಿಕೆಯಿಂದಾಗಿ ಈ ರೀತಿಯಾಗಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಈಗಾಗಲೇ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಿ, ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ ಎಂದರು.
ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ಮುದ್ದಾಪುರ ಕೇಂದ್ರದ ವೈದ್ಯಾಧಿಕಾರಿ, ವೈದ್ಯರು, ಶುಶ್ರೂಷಕರನ್ನು ಚಿಕಿತ್ಸೆಗಾಗಿ ನಿಯೋಜಿಸಲಾಗಿದೆ. ಆಂಬುಲೆನ್ಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಗ್ರಾಮದಲ್ಲಿ ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಛತೆ ಕುರಿತು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಹೆಚ್ಚಿನ ಜಾಗೃತಿಗಾಗಿ ಕರಪತ್ರ ವಿತರಿಸಲಾಗುತ್ತಿದೆ. ಕಾಯಿಸಿ ಆರಿಸಿದ ನೀರನ್ನೇ ಕುಡಿಯಿರಿ ಎಂದು ಗ್ರಾಮಸ್ಥರಲ್ಲಿ ಸಿಇಒ ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಮಾಹಿತಿ ಅನ್ವಯ ಗ್ರಾಮದ 8 ಕಡೆಗಳಲ್ಲಿನ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 7 ಮಾದರಿ ಕುಡಿಯಲು ಯೋಗ್ಯವಾಗಿದ್ದು, ಒಂದೆಡೆ ಮಾತ್ರ ಯೋಗ್ಯವಿಲ್ಲ ಎಂಬ ವರದಿ ಕೈಸೇರಿದೆ. ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಗುಣವಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಚರಂಡಿಗಳು ಒಳಗೊಂಡು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಡೆಲ್ಟಾ ಮೈತ್ರಿನ್ ಸಿಂಪಡಣೆ ಮಾಡಲಾಗುತ್ತಿದೆ. ಗ್ರಾಮದ ಮನೆ-ಮನೆಯ ಸರ್ವೆ ಕಾರ್ಯ ಕೈಗೊಂಡಿದ್ದು, ಆಶಾ ಕಾರ್ಯಕರ್ತೆಯರು ಎಲ್ಲರ ಆರೋಗ್ಯ ವಿಚಾರಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಕಾರ್ತಿಕ್, ತಹಸೀಲ್ದಾರ್ ನಾಗವೇಣಿ, ಡಿಎಚ್‌ಒ ಡಾ.ಆರ್.ರಂಗನಾಥ್, ತಾಪಂ ಇಒ ಹನುಮಂತಪ್ಪ ಇತರರಿದ್ದರು.

*ಕೋಟ್
ಒಂದೆಡೆ ಪೈಪ್‌ಲೈನ್ ಸೋರಿಕೆ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಆದರೂ ಚಿಕಿತ್ಸಾ ಸೌಲಭ್ಯ ಒಳಗೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.
ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾಧಿಕಾರಿ