ಶಿರಸಿ: ಭಟ್ಕಳ ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲಾದ್ಯಂತ ಮೇ 20ರಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ಮಧ್ಯಾಹ್ನ 1ರವರೆಗೆ ಅವಕಾಶ ಕೊಡಲಾಗಿತ್ತು. ಬಹುಜನರ ಬೇಡಿಕೆ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಣೆ ಹಿನ್ನೆಲೆಯಲ್ಲಿ ಮೇ 20ರಿಂದ ಸಂಜೆ 6ರವರೆಗೂ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗುವುದು’ ಎಂದರು.
ಆದರೆ, ಅಂಗಡಿಕಾರರು, ವ್ಯಾಪಾರಿಗಳು, ಮಾಲೀಕರು ಹಾಗೂ ಗ್ರಾಹಕರ ನಡುವೆ ಪರಸ್ಪರ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಮರೆತು ವ್ಯವಹಾರ ನಡೆಸಿದರೆ ಅಂತಹವರ ಅಂಗಡಿ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಒಳಗಡೆ ಅಂತರ್ ಜಿಲ್ಲೆಗಳಿಂದ ಬರುವವರಿಗೆ ಹೋಂ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ. ಆದರೆ, ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರಿಗೆ ಸರ್ಕಾರಿ ಕ್ವಾರಂಟೈನಲ್ಲಿ ಇಡಲಾಗುವುದು ಎಂದ ಅವರು, ಕಾರ್ವಿುಕ ಇಲಾಖೆಯಿಂದ ಕಾರ್ವಿುಕರಿಗೆ ನೀಡಬೇಕಾದ ಸೌಲಭ್ಯ ಶೀಘ್ರದಲ್ಲಿ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.