ತೆಲಸಂಗ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರದಲ್ಲಿ ಪತ್ರಿಕಾ ವಿತರಕರನ್ನು ಸತ್ಕರಿಸಲಾಯಿತು. ಮಾಜಿ ಶಾಸಕ ಶಹಜಾನ್ ಡೊಂಗರಗಾಂವ, ವೀರೇಶ್ವರ ದೇವರು, ಚಿದಾನಂದ ಸವದಿ, ವಾಸುದೇವ ಹೆರಕಲ್ ಇತರರಿದ್ದರು. 
ಜಿಲ್ಲೆ

ವಸ್ತುನಿಷ್ಠ ಮಾಹಿತಿಗೆ ಪತ್ರಿಕೆ ಓದಲಿ

ತೆಲಸಂಗ: ದೇಶದ ಸ್ವಾತಂತ್ರೃ ಚಳವಳಿಯಲ್ಲಿ ಹೋರಾಟಗಾರರಿಗೆ ಸ್ಫೂರ್ತಿ ತುಂಬುವ ಜತೆಗೆ ಸಮಾಜದ ಅಂಕುಡೊಂಕು ಎತ್ತಿ ತೋರಿಸುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸವನ್ನು ಪತ್ರಿಕೆಗಳು ಅನಾದಿಕಾಲದಿಂದ ಮಾಡುತ್ತಿವೆ ಎಂದು ಮಾಜಿ ಶಾಸಕ ಶಹಜಾನ್ ಡೊಂಗರಗಾಂವ ಹೇಳಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಥಣಿ ತಾಲೂಕು ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರದಲ್ಲಿ ಮಾತನಾಡಿ, ಎಲ್ಲ ವಿಷಯಗಳ ವಸ್ತುನಿಷ್ಠ ಮಾಹಿತಿ ಸಿಗುವುದು ಪತ್ರಿಕೆಗಳಲ್ಲಿ ಮಾತ್ರ ಎಂದರು.

ಯುವ ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಮಾತನಾಡಿ, ದೇಶದ ಅಭಿವೃದ್ಧಿ ವಿಷಯದಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಹಿರಿದಾಗಿದೆ. ಆದರೆ, ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ವಿಪರ್ಯಾಸ. ನಿತ್ಯ ಪತ್ರಿಕೆ ಓದುವ ಹವ್ಯಾಸ ರೂಢಿಸಬೇಕು ಎಂದರು.

ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಮಾತನಾಡಿ, ಕನ್ನಡ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ ವಿದ್ಯಾರ್ಥಿಗಳು ಪತ್ರಿಕಾ ರಂಗಕ್ಕೆ ಬರಬೇಕು. ಬರೆಯುವ ಕೌಶಲ ಜತೆಗೆ ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ಪತ್ರಕರ್ತರಲ್ಲಿ ದೂರ ಮತ್ತು ಸೂಕ್ಷ್ಮ ದೃಷ್ಠಿ ಇದ್ದಲ್ಲಿ ದೇಶದ ಅನೇಕ ಸಮಸ್ಯೆ ಪರಿಹರಿಸಬಹುದು ಎಂದರು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿದರು. ಪ್ರಾಚಾರ್ಯ ಶಿವಾನಂದ ಹಾಲೊಳ್ಳಿ, ಗ್ರಾಪಂ ಅಧ್ಯಕ್ಷೆ ಭಾರತಿ ಲೋಕಂಡೆ ಇತರರು ಇದ್ದರು.