ಜಿಲ್ಲೆ

ವಸ್ತು ಪ್ರದರ್ಶನ ಪ್ರಾಧಿಕಾರದ ನಿಲುವಿಗೆ ಸಚಿವರ ಅಸಮಾಧಾನ

ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ 80 ಎಕರೆ ಜಾಗವಿದ್ದರೂ ಉದ್ದೇಶಿತ ಕೆಲಸಕ್ಕೆ ಸರಿಯಾಗಿ ಬಳಕೆ ಆಗುತ್ತಿಲ್ಲ. ಈ ಬಗ್ಗೆ ಅಸಮಾಧಾನವಿದೆ ಎಂದು ಸಚಿವರು ಎಚ್.ಕೆ.ಪಾಟೀಲ್ ಹೇಳಿದರು.
ದಸರಾ ಸಂದರ್ಭದಲ್ಲಿ ಮಾತ್ರ ವಸ್ತುಪ್ರದರ್ಶನ ನಡೆಸಿ ಉಳಿದ ಸಮಯದಲ್ಲಿ ಅದರ ಉದ್ದೇಶವೇ ಈಡೇರಿಸುವುದಿಲ್ಲ. ಹಾಗಾಗಿ, ಪ್ರವಾಸಿಗರನ್ನು ಸೆಳೆಯಲು ವರ್ಷಪೂರ್ತಿ ಏನೇನು ಕಾರ್ಯಕ್ರಮ ಆಯೋಜಿಸಬೇಕು ಎನ್ನುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯ ಸಂಸ್ಕೃತಿ, ಪರಂಪರೆ ಪ್ರದರ್ಶನಕ್ಕೆ ಅವಕಾಶ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರ್ನಾಟಕ ವಸ್ತು ಪ್ರದರ್ಶನ ಬಲವರ್ಧನೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚನೆ ಮಾಡಲಾಗುವುದು. ಈ ತಂಡ 15ರಿಂದ 20 ದಿನಗಳಲ್ಲಿ ವರದಿ ನೀಡಬೇಕು. ಇದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೇಂದ್ರದಿಂದ ನಯಾಪೈಸೆ ಬಂದಿಲ್ಲ: ವರ್ಷಪೂರ್ತಿ ವಸ್ತುಪ್ರದರ್ಶನ ಆಯೋಜನೆ ಸಂಬಂಧ ಸಂಸದ ಪ್ರತಾಪ್‌ಸಿಂಹ ಸ್ವದೇಶ್ ದರ್ಶನ್ ಸಭೆ ನಡೆಸಿರುವ ವಿಚಾರ ತಿಳಿದಿಲ್ಲ. ಆದರೆ, ಕಳೆದ ಐದು ವರ್ಷಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ನಯಾಪೈಸೆ ಅನುದಾನ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಾರಂಪರಿಕ ಕಟ್ಟಡಗಳ ರಕ್ಷಣೆ:

ನಮ್ಮ ಸಂಸ್ಕೃತಿ, ಇತಿಹಾಸ ಉಳಿಸಲು ಸರ್ಕಾರ ಬದ್ಧವಾಗಿದ್ದು, ಮೈಸೂರಿನ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಒತ್ತು ಕೊಡಲಾಗುವುದು. ಅನುದಾನ ಲಭ್ಯತೆ ಆಧಾರದಲ್ಲಿ ಪಾರಂಪರಿಕ ಕಟ್ಟಡಗಳ ನಿರ್ವಹಣೆ, ಪುನರ್ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದಸರೆಗೆ 90 ದಿನ ಬಾಕಿ: ಈ ವರ್ಷದ ದಸರಾ ಮಹೋತ್ಸವಕ್ಕೆ 90 ದಿನ ಬಾಕಿ ಇದ್ದು, ಪ್ರವಾಸೋದ್ಯಮ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ. ಪ್ರತಿವರ್ಷ ನಾಡಹಬ್ಬ ಆಚರಣೆ ಸಂಬಂಧ ದಸರಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎನ್ನುವ ಒತ್ತಾಯ ಇದೆ. ಹಾಗಾಗಿ, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ನಿರ್ದೇಶಕ ರಾಮ್ವಿಲಾಸ್‌ಪ್ರಸಾದ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಜಗದೀಶ್, ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್, ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್‌ಗೌಡ, ಆರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಸುಬ್ರಹಣ್ಯ ಇದ್ದರು.