ಜಿಲ್ಲೆ

ವಸತಿ ಹಣ ಪಾವತಿಸದೆ ಅನ್ಯಾಯ

Bidar

ಭಾಲ್ಕಿ: ತಾಲೂಕು ಸೇರಿ ವಿವಿಧೆಡೆ ವಸತಿ ಯೋಜನೆ ಫಲಾನುಭವಿಗಳಿಗೆ ಹಣ ಪಾವತಿಸದೆ ಬಡವರಿಗೆ ಘೋರ ಅನ್ಯಾಯ ಮಾಡಲಾಗುತ್ತಿದೆ ಎಂದು ಸ್ಥಳೀಯ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ಕಲ್ಯಾಣ ಕರ್ನಾಟಕ ಉಸ್ತುವಾರಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಭಾನುವಾರ ಖಾನಾಪುರ ಗ್ರಾಮದಲ್ಲಿ ರಾಜಕುಮಾರ ಪಾಟೀಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಸರ್ಕಾರಕ್ಕೆ ಬಡ ಜನರ ಬಗ್ಗೆ ಕಾಳಜಿ ಇಲ್ಲ. ವಸತಿ ಫಲಾನುಭವಿಗಳಿಗೆ ಹಣ ಪಾವತಿಸುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ತಾಳಿವೆ. ಅಗತ್ಯ ವಸ್ತುಗಳ ಬೆಲೆ ದಿನೇದಿನೆ ಹೆಚ್ಚುತ್ತಿದೆ. ಸುಳ್ಳು ಆಶ್ವಾಸನೆ ನೀಡುವುದೇ ಈ ಸರ್ಕಾರಗಳ ನಿತ್ಯದ ಕೆಲಸವಾಗಿದೆ. ಹಿಂದಿನ ನಮ್ಮ ಸರ್ಕಾರದಲ್ಲಿ ಜಾರಿಗೆ ತಂದ ಅನೇಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಜನರ ಹೊಟ್ಟೆಗೆ ಮಣ್ಣು ಹಾಕುತ್ತಿವೆ. ಹೆದ್ದಾರಿ ಮಾಡುವುದಾಗಿ ಹೇಳಿ ಜನರು ಪ್ರಯಾಣ ಮಾಡದಂತಹ ದುಸ್ಥಿತಿಗೆ ತಳ್ಳಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಳಚಾಪುರ ಶ್ರೀ ಸದ್ರೂಪಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ್, ಪ್ರಮುಖರಾದ ಸಂಗಮೇಶ ಪಾಟೀಲ್, ಕಲ್ಯಾಣರಾವ ಪಾಟೀಲ್, ಶಾಮರಾವ ಪಾಟೀಲ್, ಪ್ರೇಮಸಾಗರ ಪಾಟೀಲ್, ಅಮರೇಶ್ವರ ಪಾಟೀಲ್, ಶಿವಕುಮಾರ ಭಾಲ್ಕೆ, ಬಾಬುರಾವ ಪಾಟೀಲ್, ನಾಗಯ್ಯ ಸ್ವಾಮಿ, ಶಿವಕುಮಾರ ಪಾಟೀಲ್, ಪ್ರವೀಣ ಪಾಟೀಲ್, ವಿಷ್ಣುವರ್ಧನ, ಬಸವರಾಜ ಪಾಟೀಲ್, ಧನರಾಜ ಸಂಗನಳ್ಳೆ, ಗುರುನಾಥ ರಾಯಪಳ್ಳಿ, ರವಿ ಗುರನಾಕ, ಧನರಾಜ ಕೊಟಗೊಂಡ ಇದ್ದರು. ಮಾಣಿಕರಾವ ಪಾಟೀಲ್ ಸ್ವಾಗತಿಸಿ ನಿರೂಪಣೆ ಮಾಡಿದರು.

ಪಕ್ಷದ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಹೊಸ ಜವಾಬ್ದಾರಿ ನೀಡಿದೆ. ಜನಾಶೀರ್ವಾದ, ಕಾರ್ಯಕರ್ತರ ಪ್ರೋತ್ಸಾಹ, ಪ್ರೀತಿ, ವಿಶ್ವಾಸವೇ ಇದಕ್ಕೆ ಕಾರಣವಾಗಿದೆ.| ಈಶ್ವರ ಖಂಡ್ರೆಕೆಪಿಸಿಸಿ ಕಾರ್ಯಾಧ್ಯಕ್ಷ