ಜಿಲ್ಲೆ

ವಸತಿ ಹಗರಣದ ತನಿಖೆ ನಡೆಸಲಿ

ರಾಯಬಾಗ: ಬಡವರಿಗೆ ಮನೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಲಂಚ ಪಡೆಯುತ್ತಿದೆ ಎಂದು ಆರೋಪಿಸಿ ಶಾಸಕ ಡಿ.ಎಂ. ಐಹೊಳೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ್ ಸುರೇಶ ಮುಂಜೆ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಪಂ ಕಚೇರಿವರೆಗೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಕೆಲಹೊತ್ತು ತಾಪಂ ಕಚೇರಿಗೆ ಬೀಗ ಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ವಸತಿ ಸಚಿವರು ಮನೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದಾರೆಂದು ಆಳಂದದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಮಾತನಾಡಿ, ಕೇಂದ್ರ ಸರ್ಕಾರದ ಮನೆಗಳ ಜಿಪಿಎಸ್ ಮಾಡಲು ತಾಲೂಕಿನ ಪಿಡಿಒಗಳು ೧೦ರಿಂದ ೨೦ ಸಾವಿರ ಹಣ ಪಡೆಯುತ್ತಿದ್ದಾರೆ. ಈ ಸರ್ಕಾರ ಬಂದಾಗಿನಿಂದ ಒಂದೇ ಒಂದು ಮನೆ ಕೂಡ ಮಂಜೂರು ಮಾಡಿಲ್ಲವೆಂದು ಆರೋಪಿಸಿದರು.

ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ, ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಮಹಾದೇವ ಬೋರಗಾಂವೆ, ಗಂಗಾಧರ ಮೈಶಾಳೆ, ಅಪ್ಪಾಸಾಬ ಮೈಶಾಳೆ, ಪ್ರಕಾಶ ಮಿರ್ಜೆ, ಬಸವರಾಜ ಡೊಣವಾಡೆ, ಅಂಕುಶ ಜಾಧವ, ಬಸು ಅವನ್ನವರ, ನಿಂಗಪ್ಪ ಪಕಾಂಡಿ, ಅಪ್ಪಾಸಾಬ ಬ್ಯಾಕೂಡೆ, ಆರ್.ಬಿ.ಶಹಾರೆ, ಭಾರತಿ ಲೋಹಾರ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.