ಜಿಲ್ಲೆ

ವಸತಿ ಶಾಲೆಗೆ ಶಾಸಕ ದಿಢೀರ್ ಭೇಟಿ

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಜೈನಹಳ್ಳಿ ಗ್ರಾಮದಲ್ಲಿನ ಡಾ.ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಎಚ್.ಟಿ.ಮಂಜು ಶನಿವಾರ ಸಂಜೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಶಾಲೆಯ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರು ಆಗಮಿಸುತ್ತಿದ್ದಂತೆಯೇ ಅವರನ್ನು ಸುತ್ತುವರಿದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಮಕ್ಕಳ ದೂರಿನಂತೆ ವಸತಿ ನಿಲಯದ ಅಡುಗೆ ಮನೆ, ಉಗ್ರಾಣ ಮತ್ತಿತರ ಕಡೆಗಳಲ್ಲಿ ಪರಿಶೀಲಿಸಿದಾಗ ಹುಳು ಹಿಡಿದಿರುವ ಅಕ್ಕಿ, ಗೋಧಿ, ರಾಗಿ, ಬೇಳೆ, ಬಟಾಣಿ, ಕಡಲೆಬೀಜ, ಕಡಲೆ ಹಿಟ್ಟು ಮುಂತಾದ ಆಹಾರ ಪದಾರ್ಥಗಳಿದ್ದವು. ಅಲ್ಲದೇ, ಮಕ್ಕಳಿಗಾಗಿ ಸಿದ್ದಪಡಿಸಿದ್ದ ಅನ್ನದಲ್ಲಿಯೇ ಹುಳು ಪತ್ತೆ ಮಾಡಿದ ಶಾಸಕರು, ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.

ಶಿಕ್ಷಕರು ಸಮಾಜವನ್ನು ತಿದ್ದುವ ಶಿಲ್ಪಿಗಳಾಗಿರಬೇಕು. ಆದರೆ, ಶಿಕ್ಷಕರಾದ ನೀವೆ ಮಕ್ಕಳಿಗೆ ಹುಳು ಮಿಶ್ರಿತ ಆಹಾರ ಪದಾರ್ಥಗಳಿಂದ ಅಡುಗೆ ಮಾಡಿ ನೀಡುತ್ತಿದ್ದೀರಿ. ನಿಮ್ಮ್ಮಿಂದ ಕಲಿತ ಮಕ್ಕಳು ನಿಮ್ಮಂತೆಯೇ ಮೋಸಗಾರರಾಗುವುದಿಲ್ಲವೇ? ಮಕ್ಕಳು ದೇವರಿದ್ದಂತೆ. ಮಕ್ಕಳಿಗೆ ಮೋಸ ಮಾಡುತ್ತಿರುವ ನಿಮ್ಮನ್ನು ಭಗವಂತ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.

ಮಕ್ಕಳಿಗೆ ನೀಡುತ್ತಿರುವ ಕಳಪೆ ಗುಣಮಟ್ಟದ ಆಹಾರವನ್ನು ಯಾವುದೇ ಕಾರಣಕ್ಕೂ ನೀಡಬಾರದು. ಇದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಸರ್ಕಾರದಿಂದ ಪೂರೈಕೆ ಆಗುತ್ತಿರುವ ಗುಣಮಟ್ಟದ ಆಹಾರ ಸಾಮಗ್ರಿ ಏನಾಗುತ್ತಿದೆ. ಸಮಾಜದ ಅತ್ಯಂತ ಶೋಷಿತ ಸಮುದಾಯದ ಮಕ್ಕಳು ಇಲ್ಲಿ ಕಲಿಯಲು ಬರುತ್ತಿದ್ದಾರೆ. ಅವರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ನೀವು ಶಿಕ್ಷಕರಾಗಿರಲು ಅರ್ಹರಲ್ಲ ಎಂದು ಗುಡುಗಿದರು.
ಶಾಲೆಯಲ್ಲಿ 93 ಹೆಣ್ಣು ಮಕ್ಕಳಿದ್ದರೂ ಇಲ್ಲಿ ಮಹಿಳಾ ವಾರ್ಡನ್ ಇಲ್ಲ. ಹೆಣ್ಣು ಮಕ್ಕಳೊಂದಿಗೆ ರಾತ್ರಿ ಇರಲು ನರ್ಸ್ ಒಬ್ಬರನ್ನು ನಿಯೋಜಿಸಿದ್ದರೂ ಅವರು ಬರುತ್ತಿಲ್ಲ. ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಸೇಪ್ಟಿ ಪ್ಯಾಡ್ ಸೇರಿದಂತೆ ಯಾವುದೇ ಆರೋಗ್ಯ ಕಿಟ್‌ಗಳನ್ನು ವಿತರಿಸಿಲ್ಲ. ಮಕ್ಕಳ ಉಪಯೋಗಕ್ಕೆ ನೀಡಿರುವ ಸೋಪು, ಟೂತ್‌ಪೇಸ್ಟ್ ಮತ್ತಿತರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡಿಲ್ಲ. ಇದೆಲ್ಲದರ ಸಮಗ್ರ ತನಿಖೆಯಾಗಬೇಕು. ವಸತಿ ಶಾಲೆಯಲ್ಲಿ ನಡೆಯುತ್ತಿರುವ ಮಕ್ಕಳ ಶೋಷಣೆ ನಿಲ್ಲಬೇಕು. ತಪ್ಪಿತಸ್ಥ ಶಿಕ್ಷಕರಿಗೆ ಶಿಕ್ಷೆಯಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.