ಗುಳೇದಗುಡ್ಡ: ಕಳೆದ ನಾಲ್ಕು ತಿಂಗಳ ಹಿಂದೆ ತೋಗುಣಸಿ ರಸ್ತೆಗೆ ಹೊಂದಿಕೊಂಡು ಹಾನಾಪುರ ಎಸ್‌ಪಿ ಗ್ರಾಪಂ ವ್ಯಾಪ್ತಿಯ ವಿಶಾಲವಾದ ಪ್ರದೇಶದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣವಾಗಿದ್ದರೂ ಅದಕ್ಕೆ ಸರಿಯಾದ ಮುಖ್ಯರಸ್ತೆ ಇಲ್ಲ. ಪಾಲಕರಿಗೆ, ಮಕ್ಕಳಿಗೆ ಬರಲು ಸಾಕಷ್ಟು ಅನನುಕೂಲವಾಗಿದೆ. ಮುಖ್ಯ ರಸ್ತೆ ನಿರ್ಮಿಸಿ ಕೊಡುವಂತೆ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಇಂದಿರಾಗಾಂಧಿ ವಸತಿ ಶಾಲೆ ಪ್ರಾಚಾರ್ಯೆ ರುಕ್ಮಿಣಿಬಾಯಿ ಪವಾರ ಮನವಿ ಮಾಡಿದ್ದಾರೆ.
ಸಮೀಪದ ಇಂದಿರಾಗಾಂಧಿ ವಸತಿ ಶಾಲೆಗೆ ಬುಧವಾರ ಇಒ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಶಾಲೆ ವಾತಾವರಣ ತುಂಬ ಚೆನ್ನಾಗಿದ್ದೂ ಮಕ್ಕಳು ಮತ್ತು ಪಾಲಕರಿಗೆ ಶಾಲೆಗೆ ಬರಲು ಮುಖ್ಯ ರಸ್ತೆಯೇ ಇಲ್ಲದಂತಾಗಿದೆ. ತೋಗುಣಸಿ ಬಸ್ ನಿಲ್ದಾಣದಿಂದ ಬರಬೇಕಾದರೆ ಸರಿಯಾದ ರಸ್ತೆಯಿಲ್ಲ. ಅಲ್ಲದೆ ಬಹಳ ದೂರವಾಗುತ್ತದೆ. ಡಿಪ್ಲೊಮಾ ಕಾಲೇಜು ಪ್ರಮುಖ ರಸ್ತೆಯಿಂದ ಕೇವಲ 200 ಮೀಟರ್ ಅಂತರದಲ್ಲಿ ನಮ್ಮ ಶಾಲೆ ಇದೆ. ಈ ಮಾರ್ಗವನ್ನೇ ರಸ್ತೆಯನ್ನಾಗಿ ನಿರ್ಮಿಸಿಕೊಡಲು ವಿನಂತಿಸಿಕೊಂಡರು.
ಈ ವಿಷಯವನ್ನು ಸಿಇಒ ಅವರ ಗಮನಕ್ಕೂ ತರುತ್ತೇನೆ. ಆದರೆ ತಾಪಂ ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಇರುವುದಿಲ್ಲ. ಶಾಸಕರ ಹಾಗೂ ಇತರ ಅನುದಾನ ಬಳಸಿ ತಾವು ರಸ್ತೆ ನಿರ್ಮಿಸಿಕೊಳ್ಳಬೇಕಾಗುತ್ತದೆ. ಆದರೂ ಸಿಇಒ ಅವರ ಗಮನಕ್ಕೆ ತಂದು ಅನುಕೂಲ ಮಾಡಿಕೊಡುತ್ತೇವೆ ಎಂದು ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ ಮಾತನಾಡಿ, ಶಾಲೆಯ ಉದ್ಘಾಟನೆಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಬರುವ ಹಿಂದಿನ ದಿನ ಸದ್ಯ ಇರುವ ರಸ್ತೆಯನ್ನೂ ಬಳಸಲು ಅಲ್ಲಿನ ರೈತರು ಅವಕಾಶ ಕೊಟ್ಟಿರಲಿಲ್ಲ. ಅವರಿಗೆ ಮನವಿ ಮಾಡಿಕೊಂಡಾಗ ಅವರು ಅವಕಾಶ ನೀಡಿದ್ದಾರೆ. ಡಿಪ್ಲೊಮಾ ಕಾಲೇಜು ಪಕ್ಕದ ಮಾರ್ಗ ಹತ್ತಿರವಾಗುತ್ತದೆ. ಆದರೆ ಅದು ಖಾಸಗಿ ಜಮೀನು ಆಗಿದ್ದು, ಸರ್ಕಾರಮಟ್ಟದಲ್ಲಿ ಕೆಲಸವಾಗಬೇಕು ಎಂದರು.
ಬಾರದ ಸಿಇಒ: ಬಾಗಲಕೋಟೆ ಜಿಪಂ ಸಿಇಒ ಶಶಿಧರ ಕುರೇರ ಇಂದಿರಾಗಾಂಧಿ ವಸತಿ ಶಾಲೆಗೆ ಮಧ್ಯಾಹ್ನ 3 ಗಂಟೆಗೆ ಬರಬೇಕಾಗಿತ್ತು. ನಂತರ ಸರ್ಕಾರಿ ಆಸ್ಪತ್ರೆ ಹಾಗೂ ತಾಪಂ ಕಚೇರಿಗೆ ಭೇಟಿ ನೀಡಲಿದ್ದರು. ಅವರು ಸಂಜೆ 4.30 ಗಂಟೆಯಾದರೂ ಬಾರದ ಕಾರಣ ಅವರಿಗಾಗಿ ಎಲ್ಲರೂ ಕಾಯಬೇಕಾಯಿತು. ತಾಪಂ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗಾಧಿಕಾರಿ ರಾಮಚಂದ್ರ ಮೇತ್ರಿ, ಪಿಡಿಒ ಸುನೀತಾ ಅಂಕೋಲೆ, ತಾಪಂ ಯೋಜನಾಧಿಕಾರಿ ಶೇಖರ ಅಂಗಡಿ ಮತ್ತಿತರರು ಇದ್ದರು.