ಜಿಲ್ಲೆ

ವಸತಿ ಶಾಲೆಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ

ಅರಕಲಗೂಡು: ಕಡು ಬಡತನದಿಂದ ಕೂಡಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದ 830 ವಸತಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ವಹಿಸುವ ಜತೆಗೆ ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ವಸತಿ ಶಾಲೆಯಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ತಾಲೂಕಿನ ಬರಗೂರು- ದೊಡ್ಡಮಗ್ಗೆ ಗ್ರಾಮದಲ್ಲಿ ಗುರುವಾರ 24 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಅಂಬೇಡ್ಕರ್ ವಸತಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಹಾಸ್ಟೆಲ್‌ಗಳ ನಿರ್ವಹಣೆಗೆ 1,110 ಕೋಟಿ ರೂ. ಅಗತ್ಯವಿದ್ದು, ಸದ್ಯಕ್ಕೆ 710 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮೆರಿಟ್ ಆಧಾರದ ಮೇಲೆ ಹಾಸ್ಟೆಲ್‌ಗಳ ನಿರ್ವಹಣೆಗೆ ಅನುದಾನ ನೀಡಲಾಗುವುದು. ವಸತಿ ಶಾಲೆಗಳಲ್ಲಿ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡುವ ಸಮವಸ್ತ್ರಗಳಿಗೆ 18 ಕೋಟಿ ರೂ. ವ್ಯಯಿಸಲಾಗುತ್ತಿದೆ. ತಾಲೂಕಿನಲ್ಲಿ ಅರೆಬರೆ ಕಾಮಗಾರಿ ನಡೆದು ಪಾಳು ಬಿದ್ದಿರುವ 41 ಅಂಬೇಡ್ಕರ್ ವಸತಿ ಶಾಲೆಗಳ ಅಭಿವೃದ್ಧಿ ಕೆಲಸಕ್ಕಾಗಿ 3.41 ಕೋಟಿ ರೂ. ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ವಿ.ಮಂಜುನಾಥ್, ತಹಸೀಲ್ದಾರ್ ಶ್ರೀನಿವಾಸ್, ತಾಪಂ ಇಒ ಗಿರೀಧರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ್ ಅಹಮದ್, ಮಲ್ಲಿಕಾರ್ಜುನ ಎಸ್.ಅಲ್ಲೀಪುರ್, ಪ್ರಾಂಶುಪಾಲೆ ಜಿ.ಸುಮಲತಾ, ಬಿಇಒ ದೇವರಾಜು ಇತರರಿದ್ದರು. ವಸತಿ ಶಾಲೆ ಹೆಣ್ಣು ಮಕ್ಕಳು ಕರಾಟೆ ಪ್ರದರ್ಶಿಸಿದರು.


ಇದಕ್ಕೂ ಮುನ್ನ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ರಸ್ತೆ, ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 1.19 ಕೋಟಿ ರೂ ವೆಚ್ಚದ ವಿವಿಧ ಪ್ರಗತಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.