ಹೂವಿನಹಡಗಲಿ: ನಂದಿಹಳ್ಳಿ ಗ್ರಾಮದಲ್ಲಿನ ಶ್ರೀ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
ವಸತಿ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 205 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕಟ್ಟಡ, ವಸತಿ ನಿಲಯ, ಕಾಯಂ ಶಿಕ್ಷಕರಿಲ್ಲದಿರುವುದು ಸೇರಿದಂತೆ ಇತರ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದರು.
ತರಗತಿಗಳಲ್ಲಿ ಬೆಂಚ್‌ಗಳಿಲ್ಲದೆ ನೆಲದ ಮೇಲೆ ಕುಳಿತುಕೊಳ್ಳಬೇಕಾಗಿತ್ತು. ಬಿಸಿನೀರಿನ ವ್ಯವಸ್ಥೆ ಇರಲಿಲ್ಲ. ಊಟದ ನಂತರ ಕೈ ತೊಳೆದುಕೊಳ್ಳಲು ವ್ಯವಸ್ಥೆ ಇರಲಿಲ್ಲ. ವಸತಿ ಕೋಣೆಯಲ್ಲಿ ಸಮರ್ಪಕವಾದ ಬೆಡ್‌ಗಳು ಲಭ್ಯವಿರಲಿಲ್ಲ. ಈ ಕುರಿತು ವಿಜಯವಾಣಿ ಸೆ.13 ರಂದು ‘ವಸತಿ ಶಾಲೇಲಿ ಮಕ್ಕಳಿಗೆ ಫಜೀತಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ವಸತಿ ನಿಲಯಕ್ಕೆ ಶನಿವಾರ ಭೇಟಿ ನೀಡಿ ಹೊಸ ಬೆಡ್‌ಗಳನ್ನು ಕಲ್ಪಿಸುವುದರೊಂದಿಗೆ ವಿದ್ಯುತ್ ವಾಟರ್ ಹೀಟರ್ ಅಳವಡಿಸಿದ್ದಾರೆ. ಶಾಲೆಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ವಿಜಯವಾಣಿ ಪ್ರಕಟಿಸಿದ ವಿಶೇಷ ವರದಿಯಿಂದಾಗಿ ನಮಗೆ ಮೂಲ ಸೌಲಭ್ಯಗಳು ದೊರೆಯುವಂತಾಯಿತು ಎಂದು ವಿದ್ಯಾರ್ಥಿಗಳು, ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.