ಜಿಲ್ಲೆ

ವಸತಿ ಶಾಲೆಗಳಲ್ಲಿ 7 ಸಾವಿರ ಮಕ್ಕಳಿಗೆ ಶಿಕ್ಷಣ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ಹಾಗೂ ಇತರ ಮಾದರಿ ವಸತಿ ಶಾಲಾ, ಕಾಲೇಜುಗಳಲ್ಲಿ ಸುಮಾರು 7 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.


ತಾಲೂಕಿನ ಮಂಗಲ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಮಂಗಳವಾರ ಕ್ಷೇತ್ರದ ವಿವಿಧ ಮಾದರಿ ವಸತಿ ಶಾಲೆಗಳ ವತಿಯಿಂದ ಆಯೋಜಿಸಿದ್ದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.


ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಗಿರಿಜನರ ಹಾಡಿಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಸ್ಟಿ ವರ್ಗದ ಮಕ್ಕಳಿದ್ದಾರೆ. ಆದರೆ ಈ ಹಿಂದೆ ಮಕ್ಕಳು ಶಿಕ್ಷಣವನ್ನು ಪಡೆಯಬೇಕಾದರೆ ತುಂಬ ತೊಂದರೆ ಅನುಭವಿಸುತ್ತಿದ್ದರು. ಕೆಲವು ಪಾಲಕರು ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದರು. ಇದನ್ನು ಅರಿತು ಈ ಭಾಗದಲ್ಲಿ ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಏಕಲವ್ಯ ಮಾದರಿ ವಸತಿ ಶಾಲೆಯನ್ನು ತೆರೆಯುವಂತೆ ಅಂದಿನ ಸಂಸದ ಆರ್.ಧ್ರುವನಾರಾಯಣ ಅವರಲ್ಲಿ ಮನವಿ ಮಾಡಲಾಗಿತ್ತು. ಈ ವೇಳೆ ರಾಜ್ಯಕ್ಕೆ ಮಂಜೂರಾದ 6 ಶಾಲೆಗಳ ಪೈಕಿ ಮಂಗಲದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಒಂದು ಶಾಲೆಯನ್ನು ತೆರೆಯಲಾಯಿತು. ಪ್ರಾರಂಭದಲ್ಲಿ ಗಿರಿಜನರು ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದರು. ಈ ಬಗ್ಗೆ ತಿಳಿದು ಸ್ವತಃ ನಾನೇ ಪೋಡುಗಳಿಗೆ ತೆರಳಿ ಪಾಲಕರಲ್ಲಿ ಶಿಕ್ಷಣದ ಮಹತ್ವ ಹಾಗೂ ಶಾಲೆಯ ಬಗ್ಗೆ ಅರಿವು ಮೂಡಿಸಲಾಯಿತು. ಇದೀಗ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ವಸತಿ ಶಾಲೆಗಳಲ್ಲಿ ಸುಮಾರು 7 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.


ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಹನೂರಿನಲ್ಲಿ ಈ ಹಿಂದೆ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಕೊಳ್ಳೇಗಾಲ ಹಾಗೂ ಮೈಸೂರಿಗೆ ತೆರಳುತ್ತಿದ್ದರು. ಇದನ್ನು ಮನಗಂಡು ಹನೂರಿನಲ್ಲಿ ಪ್ರಥಮ ದರ್ಜೆ ಕಾಲೇಜನ್ನು ತೆರೆಯಲಾಯಿತು. ಆದರೆ ಹಾಸ್ಟೆಲ್ ಸೌಲಭ್ಯ ಇಲ್ಲದ ಕಾರಣ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಈ ದಿಸೆಯಲ್ಲಿ ಹಾಸ್ಟೆಲ್ ಸೌಕರ್ಯವನ್ನು ಕಲ್ಪಿಸಲಾಯಿತು. ಅಲ್ಲದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾಳ್ಯ ಹಾಗೂ ರಾಮಾಪುರದಲ್ಲಿ ತಲಾ 16.5 ಕೋಟಿ ರೂ. ವೆಚ್ಚದಲ್ಲಿ ಇಂದಿರಾಗಾಂಧಿ ಮಾದರಿ ವಸತಿ ಶಾಲೆ, 4.5 ಕೋಟಿ ರೂ. ವೆಚ್ಚದಲ್ಲಿ ನಕ್ಕುಂದಿ ಗಿರಿಜನರ ಆಶ್ರಮ ಶಾಲೆ ಹಾಗೂ ಇನ್ನಿತರ ಕಡೆ ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.


ಓದಿನ ಕಡೆ ಆಸಕ್ತಿ ವಹಿಸಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಬೇಕಾದರೆ ತುಂಬ ಶ್ರಮಿಸಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಶ್ರಮಿಸಬೇಕು. ಹಾಗೆಯೇ ಪ್ರತಿಭೆಯನ್ನು ಗುರ್ತಿಸಿ ಶಾಲೆಯಲ್ಲಿ ವೇದಿಕೆ ನಿರ್ಮಿಸಿಕೊಡುವುದರ ಮೂಲಕ ಅವರನ್ನು ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲ ಮಂಜುನಾಥ್, ವಿವಿಧ ಮಾದರಿ ಶಾಲೆಯ ಪ್ರಾಂಶುಪಾಲರಾದ ಪವಿತ್ರಾ, ನಿಂಗರಾಜು, ಕೃಷ್ಣಪ್ರಸಾದ್, ಲಾಲುನಾಯಕ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಶಿಕ್ಷಣ ಸಂಯೋಜಕ ಕಿರಣ್‌ಕುಮಾರ್, ನಿಲಯ ಮೇಲ್ವಿಚಾರಕ ಚಂದ್ರ ಹಾಗೂ ಉಪನ್ಯಾಸಕರು, ಶಿಕ್ಷಕರು ಇದ್ದರು.