ಯಳಂದೂರು : ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಬಿಳಿಗಿರಿರಂಗನಬೆಟ್ಟದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಡಗೆರೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಶಿಕ್ಷಕರು ತರಗತಿಗಳಲ್ಲಿ ಶುಕ್ರವಾರ ಕಪ್ಪು ಪಟ್ಟಿಧರಿಸಿ ಪಾಠ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಒಟ್ಟು 823 ವಸತಿ ಶಾಲೆಗಳಿದ್ದು, ಅದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಸುಮಾರು 20 ವಸತಿ ಶಾಲೆಗಳನ್ನು ಒಳಗೊಂಡಿದೆ. ಸುಮಾರು 130ಕ್ಕೂ ಹೆಚ್ಚು ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 30ರಂದು ತರಗತಿಯಲ್ಲಿ ಕಪ್ಪುಪಟ್ಟಿ ಧರಿಸಿ ಅಸಹಕಾರ ವ್ಯಕ್ತಪಡಿಸಿದ್ದು, ಮೇ 31 ರಂದು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜೂ.2ರಿಂದ ವಸತಿ ಶಾಲೆಗಳ ಮುಂಭಾಗ ಧರಣಿ ನಡೆಸಲು ಸಹ ತಯಾರಿ ನಡೆದಿದೆ ಎಂದು ಶಿಕ್ಷಕರು ತಿಳಿಸಿದರು.
ಈ ಹಿಂದೆಯೇ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನಲ್ಲಿ ಮೇ 26 ರಿಂದ 28 ರವರೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಸಹ ಮಾಡಲಾಯಿತು. ವಸತಿ ಶಾಲೆಗಳ ನಿರ್ವಹಣೆಗೆ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. ಅಲ್ಲದೆ ಮರಣ ಮತ್ತು ನಿವೃತ್ತಿ ಉಪದಾನ (ಡಿಸಿಆರ್‌ಜಿ) ಸೌಲಭ್ಯಕ್ಕೆ ಅನುಮೋದನೆ ನೀಡಬೇಕು. ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ನಮಗೂ ಜಾರಿ ಮಾಡಬೇಕು. ಉಚಿತ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು. ವಸತಿ ಶಿಕ್ಷಕರು ಹೆಚ್ಚು ಕಾಲ ಶಾಲೆಯಲ್ಲೇ ಇರುವುದರಿಂದ ಹೆಚ್ಚಿನ ವೇತನವನ್ನು ನೀಡಬೇಕು. ವಿಶೇಷ ಭತ್ಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಮುಖ್ಯಶಿಕ್ಷಕ ಕುಮಾರಸ್ವಾಮಿ, ಬಸವಣ್ಣ, ಶಿಕ್ಷಕರಾದ ಸುನೀಲ್‌ಕುಮಾರ್, ಜ್ಞಾನೇಂದ್ರಸ್ವಾಮಿ, ನಳಿನಾ, ತ್ಯಾಗರಾಜು, ನಾಗರಾಜು, ಶಶಿಧರ್, ನಂದೀಶ್ ಇತರರಿದ್ದರು.