ಕಾನಹೊಸಹಳ್ಳಿ: ತಾಲೂಕಿನಲ್ಲಿರುವ ವಸತಿ ಶಾಲೆಗಳನ್ನು ಕಾಲೇಜುಗಳಾಗಿ ಮೇಲ್ದರ್ಜೆಗೇರಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ತಾಯಕನಹಳ್ಳಿ ಬಳಿಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 6.50 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಅಂತಸ್ತಿನ ವಸತಿನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಜನರು ಹೆಚ್ಚಾಗಿ ಗುಳೆ ಹೋಗುವುದರಿಂದ ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ತಾಲೂಕಿನಲ್ಲಿ ಇನ್ನಷ್ಟು ವಸತಿ ಶಾಲೆಗಳ ಅಗತ್ಯವಿದೆ. ಈಗಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 50ರಿಂದ 60ಕ್ಕೆ ಏರಿಕೆ ಮಾಡುವಂತೆ ಕೋರಲಾಗಿದೆ. ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಕಾಲೇಜು ಆರಂಭಿಸುವುದರಿಂದ ಬಡವರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ಕರ್ನಾಟಕ ಗೃಹಮಂಡಳಿ ಎಇಇ ವಸಂತಕುಮಾರಿ, ಪ್ರೌಢಶಾಲೆ ಮುಖ್ಯಶಿಕ್ಷಕ ಎ.ಬಿ.ರಂಗಪ್ಪ, ಗ್ರಾಪಂ ಸದಸ್ಯ ಕೆ.ಎನ್.ರಾಘವೇಂದ್ರ, ಪ್ರಮುಖರಾದ ಮಹಾಂತಪ್ಪ, ಜುಮ್ಮೋಬನಹಳ್ಳಿ ಜಿ.ಓಬಣ್ಣ, ಗುಂಡುಮುಣುಗು ಮಂಜುನಾಥ, ಹುಡೇಂ ಕೆ.ಆರ್.ರವಿ, ಬೋಸೆಮಲ್ಲಯ್ಯ, ಕೋಣನವರ ಮಲ್ಲಿಕಾರ್ಜುನ, ಜುಮ್ಮೋಬನಹಳ್ಳಿ ಪಾಲಯ್ಯ, ಪಾಪಣ್ಣ, ಪಾಲಾಕ್ಷಪ್ಪ, ಅಜೀಜ್ ಅಹಮ್ಮದ್, ಕೆ.ಬಿ.ಹಟ್ಟಿ ಟಿ.ದಾಸಣ್ಣ, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಕೊಂಡ್ಲಹಳ್ಳಿ ತಿಪ್ಪೇಸ್ವಾಮಿ, ಹಾಸ್ಟೆಲ್ ವಾರ್ಡನ್ ಪದ್ಮಜಾ, ಶಿಕ್ಷಕರು ಇದ್ದರು.