ಕಲಬುರಗಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಜಿಲ್ಲೆಯಲ್ಲಿ ೧೩,೧೭೫ ಮನೆಗಳು ಮಂಜೂರಾಗಿದ್ದು, ಫಲಾನುಭವಿಗಳ ಪಟ್ಟಿ ಮಾಡಿ ಮಂಜೂರಿಗೆ ಸಲ್ಲಿಸಲು ಆದೇಶ ಮಾಡಲಾಗಿದೆ. ಆದರೆ ಗ್ರಾಮದಲ್ಲಿನ ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು ಬಡವರಿಂದ ೩೦ ಸಾವಿರ ರೂ. ಹಣ ವಸೂಲಿಗೆ ಇಳಿದಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಆಗ್ರಹಿಸಿದರು.
ಗ್ರಾಮಸಭೆಗಳನ್ನು ನಡೆಸದೆ ಸುಳ್ಳು ಮಾಹಿತಿ ನೀಡಿ, ಮನೆ ಮಂಜೂರಿ ಮಾಡಲಾಗುತ್ತಿದೆ. ಆದರೆ ನಿಜವಾದ ಬಡವರಿಗೆ ಮನೆಗಳು ದೊರೆಯುತ್ತಿಲ್ಲ. ಅಲ್ಲದೆ ಮನೆಗಳು ಸಿಗದ ರೀತಿ ಪಟ್ಟಿ ಮಾಡಲಾಗುತ್ತದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಇದೇ ಮಾದರಿ ನಡೆದಿದ್ದು, ಕೂಡಲೇ ಇದಕ್ಕೆ ತಡೆ ಒಡ್ಡಬೇಕು. ಬಡವರಿಂದ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ ಅಡಿ ಅಫಜಲಪುರ ನಗರದಲ್ಲಿ ೨೫೬ ಮನೆಗಳನ್ನು ಸುಳ್ಳು ಸೃಷ್ಟಿಸಿ, ೨೫೬ ಜನರ ಖಾತೆಗೆ ಹಣ ಜಮಾ ಮಾಡಿಸಿ, ಗುಳುಂ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಅಫಜಲಪುರ ನಗರಸಭೆಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಅನಾಮಿಕರ ಹೆಸರಿಗೆ ಜಮಾ ಆಗಿರುವ ೨.೫೬ ಕೋಟಿ ರೂ. ಹಿಂಪಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಅಫಜಲಪುರ ತಾಲೂಕಿನ ಅಳ್ಳಗಿ (ಬಿ), ಕರ್ಜಗಿ, ಕಲ್ಲೂರ, ಗೌರ ಬಿ, ಘತ್ತರಗಾ, ತೆಲ್ಲೂರ, ನಂದರ್ಗಾ, ಬಂದರವಾಡ, ಬಡದಾಳ, ಬಂಕಲಗಾ, ಮಣ್ಣೂರ, ಹಸರಗುಂಡಗಿ ಗ್ರಾಪಂನಲ್ಲಿ ೨೦೨೨-೨೩ನೇ ಸಾಲಿನಲ್ಲಿ ಬಸವ ವಸತಿ ಯೋಜನೆ ಅಡಿ ೧,೮೯೯ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿ ೬೦೧ ಮನೆ ಮಂಜೂರಾಗಿದ್ದು, ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡದೆ, ಬೇಕಾಬಿಟ್ಟಿಯಾಗಿ ಹಣ ಪಡೆದು ಮಂಜೂರು ಮಾಡುವ ಪ್ರಕ್ರಿಯೆ ನಡೆದಿದೆ. ಈ ಕುರಿತು ತನಿಖೆ ನಡೆಸಬೇಕು. ಈ ಕುರಿತು ಹಳ್ಳಿಗಳಲ್ಲಿ ಡಂಗೂರ ಸಾರಿಸಬೇಕು, ಗ್ರಾಮ ಸಭೆ ಮೂಲಕ ಅರ್ಹ ಫಲಾನುಭವಿಗಳ ಹೊಸ ಆಯ್ಕೆ ಪಟ್ಟಿ ತಯಾರಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ವಿದ್ಯಾಧರ ಮಂಗಳೂರೆ, ಬಸವರಾಜ ಸಪ್ಪನಗೋಳ, ಬಸವರಾಜ ಮದ್ದರ್ಕಿ, ಬಸವರಾಜ ಇಂಗಳಗಿ, ಚಂದ್ರಕಾAತ, ಬಾಬುರಾವ ರಾಜಾಪುರ ಇತರರಿದ್ದರು.