ಚಿತ್ರದುರ್ಗ: ವಸತಿ ಯೋಜನೆಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ (ಎನ್‌ಎನ್‌ಜಿಎಸ್‌ಎಂ), ಸಮರ ಸಾರಥಿ ಚಿತ್ರದುರ್ಗ ಸೇರಿ ರಾಜ್ಯದ ಅನೇಕ ಸಂಘಟನೆಗಳ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಸಮೀಕ್ಷೆ ನಡೆಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ನಮ್ಮ ಸಮುದಾಯ ರಾಜ್ಯಾದ್ಯಂತ ಹರಿದು ಹಂಚಿ ಹೋಗಿದ್ದು, ಮೂಲ ಸಮೀಕ್ಷೆ ನಡೆಸಬೇಕೆಂದು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಿದ್ದೇವೆ. ಈವರೆಗೂ ಇದಕ್ಕೆ ಸ್ಪಂದಿಸಿಲ್ಲ. ಜನಸಂಖ್ಯೆಯ ನಿಖರ ಅಂಕಿ-ಅಂಶ ತಿಳಿಯಲು ಶೀಘ್ರ ನಮ್ಮ ವಿವಿಧ ಸಂಘಟನೆಗಳ ಮೂಲಕ ಸಮೀಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ನೀತಿಗೆ 2017ರಲ್ಲೇ ಅನುಮೋದನೆ ನೀಡಲಾಗಿದೆ. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರೇ ಈಗಲೂ ಮುಖ್ಯಮಂತ್ರಿಯಾಗಿದ್ದು, ಕೂಡಲೇ ನಮ್ಮ ಸಮುದಾಯದ ನೀತಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ನಮ್ಮ ಸಮುದಾಯದ ಬಹುತೇಕರು ಭಿಕ್ಷಾಟನೆ, ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದಲ್ಲಿ ತಾರತಮ್ಯ, ಅವಕಾಶ ವಂಚನೆಯಿಂದ ನಮಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡರು.
ನಮ್ಮ ಮೇಲೆ ನಡೆಯುವ ದೌರ್ಜನ್ಯ ತಪ್ಪಿಸಬೇಕು. ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ, ಆರ್ಥಿಕ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಆದ್ದರಿಂದ ಆದಷ್ಟು ತ್ವರಿತವಾಗಿ ನಮಗಾಗಿ ರೂಪಿಸಿರುವ ನೀತಿಯನ್ನು ಅನುಷ್ಠಾನಗೊಳಿಸಬೇಕು. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.
ಎನ್‌ಎನ್‌ಜಿಎಸ್‌ಎಂ ರಾಜ್ಯ ಘಟಕದ ಅಧ್ಯಕ್ಷ ದಿಲ್ಪರಾಜ್, ಪದಾಧಿಕಾರಿಗಳಾದ ಮಲ್ಲು ಕುಂಬಾರ, ಅರುಂಧತಿ, ಆರತಿಯಮ್ಮ, ಮಂಜುಳಾ, ಚೈತ್ರಾ, ಚಂದ್ರಮ್ಮ, ಅಕ್ಷತಾ, ಶೃತಿ, ಮಮತಾ, ದಿನೇಶ್, ದಿವ್ಯಮ್ಮ, ನೂತನಾ, ಸುಮಾ, ಸಾನಿಯಾ, ವಿನಾ, ನವ್ಯಾ, ಅಂಜು, ಲಕ್ಷ್ಮೀ, ತ್ರಿಷಾ, ನಾಗಮ್ಮ, ಬಾನಮ್ಮ, ರಾಧಾ ಇತರರಿದ್ದರು.