ಕಡೂರು: ಹಾನಿಕಾರಕ ಪ್ಲಾಸ್ಟಿಕ್‌ಮುಕ್ತ ಪಟ್ಟಣವನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಪ್ರಯುಕ್ತ ಪುರಸಭೆಯಿಂದ ಶುಕ್ರವಾರ ಏರ್ಪಡಿಸಿದ್ದ ಪ್ಲಾಸ್ಟಿಕ್‌ಮುಕ್ತ ಕಡೂರು ಅಭಿಯಾನದ ಸಮಾರೋಪದಲ್ಲಿ ಸಸಿ ನೆಟ್ಟು ಮಾತನಾಡಿದರು.ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳನ್ನು ಬಳಸಬೇಕು. ಸ್ವಚ್ಛ, ಆರೋಗ್ಯಕರ ಪಟ್ಟಣವನ್ನಾಗಿಸಲು ಎಲ್ಲರೂ ಒತ್ತು ನೀಡಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ಕೆ.ರುದ್ರೇಶ್ ಮಾತನಾಡಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಜುಲೈನಲ್ಲಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಅಂಗಡಿ ಮುಂಗಟ್ಟುಗಳಿಂದ ಸುಮಾರು 2 ಕ್ವಿಂಟಾಲ್ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಮತ್ತೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂಗಡಿಯ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಸಿದರು. ಪುರಸಭೆ ಸದಸ್ಯರಾದ ಸಂದೇಶ್‌ಕುಮಾರ್, ಮರುಗುದ್ದಿ ಮನು, ಮೋಹನ್‌ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ, ಕದಂಬ ವೆಂಕಟೇಶ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ವ್ಯವಸ್ಥಾಪಕ ಸ್ಟೀಫನ್ ಪ್ರಕಾಶ್, ಪರಿಸರ ಅಭಿಯಂತ ವೈ.ಕೆ.ಶ್ರೇಯಸ್‌ಕುಮಾರ್, ಜಗದೀಶ್ ಇತರರಿದ್ದರು.