ಕಳಸ ಪೊಲೀಸರು ಗೋವುಗಳನ್ನು ಬಾಳೆಹೊನ್ನೂರು ಸಮೀಪದ ಕೆಮ್ಮಣ್ಣು ಕಾಮಧೇನು ಗೋಶಾಲೆಗೆ ಒಪ್ಪಿಸಿದರು. ನಾಗೇಶ್ ಆಂಗೀರಸ, ರಾಮಚಂದ್ರ, ರಾಘವೇಂದ್ರ ಇದ್ದರು. 
ಜಿಲ್ಲೆ

ವಶಕ್ಕೆ ಪಡೆದ ಜಾನುವಾರುಗಳು ಗೋಶಾಲೆಗೆ

ಬಾಳೆಹೊನ್ನೂರು: ಅಕ್ರಮ ಗೋಸಾಗಣೆ ಪ್ರಕರಣದಲ್ಲಿ ವಶಪಡಿಸಿಕೊಂಡ ಮೂರು ಗೋವುಗಳನ್ನು ಕಳಸ ಪೊಲೀಸರು ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋಶಾಲೆಗೆ ಒಪ್ಪಿಸಿದರು.

ಪೊಲೀಸರಿಂದ ಗೋವುಗಳನ್ನು ಸ್ವೀಕರಿಸಿದ ಗೋಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಮಾತನಾಡಿ, ಭೌಗೋಳಿಕವಾಗಿ ಹೆಚ್ಚು ವ್ಯಾಪ್ತಿ ಹೊಂದಿರುವ ಕಳಸ ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಗೋವುಗಳ ಕಳವು ಹೆಚ್ಚಾಗಿದೆ. ಕೆಲ ಹೀನ ಮನಸ್ಸಿನ ಹಿಂದುಗಳು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲೆನಾಡಿನ ಅತಿದೊಡ್ಡ ಹುಲ್ಲುಗಾವಲು ಪ್ರದೇಶವಾಗಿರುವ ಕ್ಯಾತನಮಕ್ಕಿಯಲ್ಲಿ ಮೇಯಲು ಬರುತ್ತಿರುವ ನೂರಾರು ಗೋವುಗಳು ಇತ್ತೀಚಿನ ದಿನಗಳಲ್ಲಿ ಗೋಕಳ್ಳರ ಪಾಲಾಗುತ್ತಿವೆ. ಇಲ್ಲಿಂದ ಕಳವು ಮಾಡಿದ ಗೋವುಗಳನ್ನು ಬಾಂಗ್ಲಾ, ಬೆಂಗಳೂರು, ಮಂಗಳೂರು, ಶಿಕಾರಿಪುರ ಮುಂತಾದ ಕಡೆಗಳಿಗೆ ಜೀವಂತವಾಗಿ ಸಾಗಿಸಲಾಗುತ್ತಿದೆ. ಇದೊಂದು ವ್ಯವಸ್ಥಿತ ದಂಧೆಯಾಗಿದೆ. ಇದನ್ನು ತಡೆಯುವುದು ಪೊಲೀಸರಿಗೆ ಸವಾಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಅಕ್ರಮ ಗೋಸಾಗಣೆ ತಡೆಯಲು ಸಾಕಷ್ಟು ಶ್ರಮವಹಿಸಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಹಿಂದುಗಳು ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಹಿಂದು ಸಂಘಟನೆಗಳು ಸಹ ಕೈಜೋಡಿಸಬೇಕಿದೆ ಎಂದರು.

ಹಿಂದುತ್ವದ ಜಪ ಮಾಡುತ್ತಿರುವ ರಾಜಕಾರಣಿಗಳು ಸಹ ಅಕ್ರಮ ಗೋಸಾಗಣೆ ವಿರೋಧಿಸಿ ಮಾತನಾಡಬೇಕಿದೆ. ಕೇವಲ ಚುನಾವಣೆ ವೇಳೆಯಲ್ಲಿ ಗೋವಿನ ಹೆಸರು ಹೇಳಿ ಮತ ಕೇಳಿ ಅಧಿಕಾರಕ್ಕೆ ಬಂದರೆ ಅದಕ್ಕೆ ಬೆಲೆ ದೊರೆಯುವುದಿಲ್ಲ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿ ರಾಮಚಂದ್ರ, ರಾಘವೇಂದ್ರ, ಗೋಶಾಲೆ ಸಿಬ್ಬಂದಿ ಸತೀಶ್, ಚಂದನ್ ಗೌಡ, ಸಂಜಯ್, ಶಿವಣ್ಣ ಇತರರಿದ್ದರು.