ಪಿರಿಯಾಪಟ್ಟಣ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಹಾಡಿಗಳ ಮುಖಂಡರು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಶಕೀಲಾ ಭಾನುಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ಸರ್ಕಲ್ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಹಾಡಿ ಮುಖಂಡರು ಶೀಘ್ರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿವರೆಗೆ ಸಾಗಿದರು.
ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಜಿಲ್ಲಾಧ್ಯಕ್ಷ ಶೈಲೇಂದ್ರ ಕುಮಾರ್ ಮಾತನಾಡಿ, 1972ರ ವನ್ಯಜೀವಿ ಸಂರಕ್ಷಣ ಕಾಯ್ದೆ ಪ್ರಕಾರ ಬುಡಕಟ್ಟು ಸಮುದಾಯದವರಿಗೆ ಪುನರ್ವಸತಿ ಕಲ್ಪಿಸದೆ ಸ್ಥಳಾಂತರ ಮಾಡಿದ್ದು, ಜೀವನೋಪಾಯಕ್ಕೆ ಕೊಡಗು ಮತ್ತು ಕೇರಳಕ್ಕೆ ವಲಸೆ ಹೋಗುತ್ತಿದ್ದು, ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು. 4 ತಿಂಗಳಿನಿಂದ ಆದಿವಾಸಿಗಳಿಗೆ ಸರ್ಕಾರ ಪೌಷ್ಟಿಕ ಆಹಾರ ನೀಡದೆ ವಂಚಿಸಿದೆ ಎಂದರು.
ಹಾಡಿ ಮುಖಂಡರಾದ ಜಾನಕಮ್ಮ, ಕೀರ್ತು, ಅನಿಲ್, ಜಯಮ್ಮ, ರೇಣುಕಾ, ಪುಟ್ಟಿ, ಮಹದೇವ್, ಸುಭಾಷಿಣಿ, ರವಿ, ಪುಟ್ಟಸ್ವಾಮಿ, ಕಮಲಮ್ಮ, ರಾಜಪ್ಪ, ಜಾನು ಇತರರು ಇದ್ದರು.