ಸೋಮವಾರಪೇಟೆ: ಅಕ್ರಮ ಬಾಂಗ್ಲಾದೇಶಿ ವಲಸಿಗ ಕಾರ್ಮಿಕರ ಕ್ರಿಮಿನಲ್ ಚಟುವಟಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೊಡಗು ಸುರಕ್ಷಾ ಸಮಿತಿ ವತಿಯಿಂದ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ್ ನರಗುಂದ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕೊಡಗು ಜಿಲ್ಲೆಯ ಕಾಫಿ ತೋಟ ಮತ್ತು ಇತರ ಕಾರ್ಮಿಕ ವಲಯಗಳಲ್ಲಿ ಅಕ್ರಮ ಬಾಂಗ್ಲಾದೇಶಿ ಮೂಲದವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ನಕಲಿ ದಾಖಲೆ ಸೃಷ್ಟಿಸಿಕೊಂಡು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಾಪೋಕ್ಲು ಠಾಣಾ ವ್ಯಾಪ್ತಿಯ ಕಾರುಗುಂದ ಗ್ರಾಮದ ಕಾಫಿ ತೋಟದಲ್ಲಿ ಗೋಹತ್ಯೆ ನಡೆಸಿರುವುದು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದು, ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು, ಇನ್ನೊಂದು ಪ್ರಕರಣದಲ್ಲಿ ದರೋಡೆ, ಕಾಫಿ ಬೆಳೆಗಾರರು, ಮಹಿಳೆ ಮೇಲೆ ಹಲ್ಲೆ ನಡೆಸಿರುವುದು, ಹೀಗೆ ನಿರಂತರವಾಗಿ ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ. ಇದು ಮುಂದುವರಿದರೆ ಸಮಸ್ಯೆಯಾಗಲಿದೆ. ಕೂಡಲೇ ಪೊಲೀಸ್ ಇಲಾಖೆ, ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸುರಕ್ಷಾ ಸಮಿತಿಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಉಮೇಶ್, ಭೋಜೇಗೌಡ, ಮಹೇಶ್ ತಿಮ್ಮಯ್ಯ ಮತ್ತಿತರರು ಇದ್ದರು.