ಜಿಲ್ಲೆ

ವಲಯವಾರು ಅದಾಲತ್‌ಗೆ ಚಾಲನೆ ನೀಡಿದ ಮೇಯರ್ ಶಿವಕುಮಾರ್

ಮೈಸೂರು: ನಗರದ ನಾಗರಿಕರು ಪಾಲಿಕೆ ವಲಯ ಕಚೇರಿ ಅಲೆಯುವುದನ್ನು ತಪ್ಪಿಸಲು ಮೇಯರ್ ಶಿವಕುಮಾರ್ ಹಮ್ಮಿಕೊಂಡಿರುವ ‘ವಲಯವಾರು ಅದಾಲತ್’ಗೆ ಶುಕ್ರವಾರ ಶಾರದಾದೇವಿ ನಗರದ ಪಾಲಿಕೆ ವಲಯ ಕಚೇರಿಯಲ್ಲಿ ಚಾಲನೆ ದೊರೆಯಿತು. ಮೊದಲ ದಿನವೇ ಅದಾಲತ್‌ಗೆ ಉತ್ತಮ ಸ್ಪಂದನೆ ದೊರೆಯಿತು.

ನಾಗರಿಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಮೇಯರ್ ಶಿವಕುಮಾರ್‌ಗೆ ಅಹವಾಲು ಸಲ್ಲಿಸಿದರು. ಅಹವಾಲುಗಳನ್ನು ಆಲಿಸಿದ ಮೇಯರ್ ತಕ್ಷಣ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಲಯ ಕಚೇರಿಗಳಿಗೆ ಪ್ರತಿನಿತ್ಯ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಳಂಬ ನೀತಿ ತೋರಬಾರದು. ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡುವಂತೆ ಮಾಡಬಾರದು. ಸಾರ್ವಜನಿಕರು ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಅರ್ಜಿ ವಿಲೇವಾರಿ ಮಾಡಬೇಕು, ಸಾಧ್ಯವಾಗದೆ ಇದ್ದರೆ ಮುಖ್ಯ ಕಚೇರಿಗೆ ರವಾನಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಕೆಲಸ ಕಾರ್ಯ ಮಾಡಿಕೊಡಲು ಜನರಿಂದ ಹಣ ಪಡೆಯುವುದು ಹಾಗೂ ಮಧ್ಯವರ್ತಿಗಳ ಮೂಲಕ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಿವೇಶನ, ಖಾತೆ ವರ್ಗಾವಣೆ, ಕಂದಾಯ ನಿಗದಿ, ಬಿಲ್ಡಿಂಗ್ ಪ್ಲಾನ್, ಸಿಆರ್, ಟ್ರೇಡ್ ಲೈಸನ್ಸ್, ನೀರು ಸರಬರಾಜು, ಒಳಚರಂಡಿ ಸಮಸ್ಯೆಗಳು ಹಾಗೂ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು. ಆಶ್ರಯ ಯೋಜನೆಯಡಿ ಮನೆ ಮಂಜೂರಾಗಿದ್ದ ವರಿಗೆ ಸ್ವಾಧೀನ ಪತ್ರ, ಜನನ-ಮರಣ ಪ್ರಮಾಣ ಪತ್ರಗಳನ್ನು ಈ ಸಂದರ್ಭ ವಿತರಿಸಲಾಯಿತು.

ಈ ಸಂದರ್ಭ ಉಪ ಮೇಯರ್ ಡಾ.ಜಿ.ರೂಪ, ಪಾಲಿಕೆ ಸದಸ್ಯರಾದ ಸವಿತಾ ಸುರೇಶ್, ನಿರ್ಮಲಾ ಹರೀಶ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ್ ರೆಡ್ಡಿ, ವಲಯಾಧಿಕಾರಿ ಪ್ರಕಾಶ್, ವಲಯ ಸಹಾಯಕ ಆಯುಕ್ತರಾದ ಪ್ರಕಾಶ್, ಸತ್ಯಮೂರ್ತಿ, ಕಾರ್ಯಪಾಲಕ ಇಂಜಿನಿಯರ್‌ಗಳಾದ ಮಧು ಸೂದನ್, ರಂಜಿತ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಶ್ವಿನ್ ಕುಮಾರ್ ಹಾಗೂ ಇತರರು ಇದ್ದರು.