ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಜನರ ಬಹುದಿನಗಳ ಬೇಡಿಕೆಯಾದ ಕುಡಿಯುವ ನೀರಿನ ಎಕ್ಸ್‌ಪ್ರೆಸ್ ಪೈಪ್‌ಲೈನ್ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾ ವಾರ್ಷಿಕ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಯಾವುದೇ ಸಂಘ ಸಂಸ್ಥೆಗಳು ಮುಂಚೂಣಿಗೆ ಬರಬೇಕಾದರೆ ಸಂಘಟನೆ ಅತ್ಯಗತ್ಯ. ಇದರಿಂದ ಜನಾಂಗದವರ ಶಕ್ತಿ ಪ್ರದರ್ಶನ ಹಾಗೂ ಸರ್ಕಾರದ ಮೂಲಕ ಸವಲತ್ತುಗಳನ್ನು ಪಡೆಯಲು ಸಹಕಾರಿ ಅಗಲಿದೆ ಎಂದರು.
ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ಮಾಡಬೇಕಾದ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಮೂಲಕ ಪಟ್ಟಿ ಮಾಡುತ್ತಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿಸುವ ಗುರಿ ಇಟ್ಟುಕೊಂಡು ಬಂದಿದ್ದು ನಮ್ಮ ಆಡಳಿತ ಅವಧಿಯಲ್ಲಿ ಈ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಭಾದ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣಭಟ್, ಶ್ರೀ ರಾಘವೇಂದ್ರಸ್ವಾಮಿ ಮೃತ್ತಿಕಾ ಬೃಂದಾವನ ಟ್ರಸ್ಟ್ ಅಧ್ಯಕ್ಷೆ ರಾಜೇಶ್ವರಿ ಚಂದ್ರಶೇಖರ್ ಇತರರಿದ್ದರು.