ಗುಂಡ್ಲುಪೇಟೆ: ಕ್ರಿಸ್‌ಮಸ್ ಹಾಗೂ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಬುಧವಾರ ಕ್ರಿಸ್‌ಮಸ್ ಹಬ್ಬದ ರಜೆ ಹಾಗೂ ವರ್ಷದ ಕೊನೆಯಲ್ಲಿ ಉಳಿದಿರುವ ರಜೆಗಳನ್ನು ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಜನರು ಊಟಿ ಹಾಗೂ ಬಂಡೀಪುರದತ್ತ ಪ್ರವಾಸ ಹೊರಟಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಚೆಕ್‌ಪೋಸ್ಟ್ ಬಳಿ ಕಿ.ಮೀ. ಉದ್ದಕ್ಕೂ ಸಾಲುಗಟ್ಟಿ ನಿಲ್ಲುವಂತಾಗಿದೆ.
ಅರಣ್ಯ ಇಲಾಖೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ವಾಹನಗಳಿಂದ ಪ್ರವೇಶ ಶುಲ್ಕ ವಸೂಲು ಮಾಡುತ್ತಿದೆ. ಇದಕ್ಕಾಗಿ ಊಟಿ ರಸ್ತೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನಹಳ್ಳ ಚೆಕ್‌ಪೋಸ್ಟ್, ಕೇರಳ ರಸ್ತೆಯ ಮದ್ದೂರು ಹಾಗೂ ಮೂಲೆಹೊಳೆ ಚೆಕ್‌ಪೋಸ್ಟ್‌ಗಳಲ್ಲಿ ಟೋಲ್ ಮಾದರಿಯಲ್ಲಿ ಫಾಸ್ಟ್‌ಸ್ಟಾೃಗ್ ಮೂಲಕ ಪ್ರವೇಶ ಶುಲ್ಕ ಸಂಗ್ರಹಿಸಲಾಗುತ್ತಿದೆ. ಸರ್ವರ್ ಡೌನ್ ಮತ್ತಿತರ ಕಾರಣಗಳಿಂದ ಟೋಲ್ ಕಡಿತವಾಗುವುದು ತಡವಾಗುವುದರಿಂದ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳ ಚೆಕ್ ಪೋಸ್ಟ್‌ವರೆಗೂ ಕಾರುಗಳು ಸಾಲುಗಟ್ಟಿ ನಿಲ್ಲುತ್ತಿದ್ದು ಅಲ್ಲಲ್ಲಿ ಟ್ರಾಫಿಕ್ ಜಾಂ ಆಗುತ್ತಿದೆ.
ಸಫಾರಿಗೆ ಹರಿದುಬರುತ್ತಿದೆ ಪ್ರವಾಸಿಗರ ದಂಡು: ಕಳೆದ ನಾಲ್ಕು ದಿನಗಳಿಂದ ಮೇಲುಕಾಮನಹಳ್ಳಿಯಲ್ಲಿರುವ ಅರಣ್ಯ ಇಲಾಖೆಯ ಸಫಾರಿ ಕೌಂಟರ್ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಪಾರ್ಕಿಂಗ್ ಸ್ಥಳದಲ್ಲಿ ಕಾರುಗಳನ್ನು ನಿಲ್ಲಿಸಲು ಸಾಧ್ಯವಾಗದೆ ರಸ್ತೆ ಬದಿಗಳಲ್ಲಿ ನಿಲ್ಲಿಸುವಂತಾಗಿದೆ.
ಏಕಕಾಲದಲ್ಲಿ ಸಾವಿರಾರು ಪ್ರವಾಸಿಗರು ಸಫಾರಿಗೆ ಆಗಮಿಸಿದ್ದರಿಂದ ಅರಣ್ಯ ಇಲಾಖೆಯು ತನ್ನ ಎಲ್ಲ ವಾಹನಗಳನ್ನೂ ಬಳಸಿಕೊಳ್ಳುತ್ತಿದೆ. 15, 23 ಹಾಗೂ 27, 31 ಸೀಟ್ ಸಾಮರ್ಥ್ಯದ 8 ಬಸ್ಸುಗಳು, 6 ಸೀಟ್ ಸಾಮರ್ಥ್ಯದ ಜಿಪ್ಸಿ ಕ್ಯಾಂಪರ್‌ಗಳು ಸೇರಿದಂತೆ ಬಂಡೀಪುರ ಯುವಮಿತ್ರ ಯೋಜನೆಯ ಎರಡು ಬಸ್ಸುಗಳನ್ನು ಬಳಸಿಕೊಳ್ಳುತ್ತಿದೆ. ಇದರಿಂದ ಒಂದೇ ದಿನ 8 ಲಕ್ಷ ರೂ.ಗಳಷ್ಟು ದಾಖಲೆ ಪ್ರಮಾಣದ ಆದಾಯ ಸಂಗ್ರಹವಾಗಿದೆ. ಜ.1 ರವರೆಗೂ ಇದೇ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಒಂದೇ ವಾರದಲ್ಲಿ ಕೋಟಿಗಟ್ಟಲೆ ಆದಾಯ ಸಂಗ್ರಹದ ನಿರೀಕ್ಷೆಯುಂಟು ಮಾಡಿದೆ.