ಜಿಲ್ಲೆ

ವರ್ಷದೊಳಗೆ ರೋಪ್ ವೇ ಅಳವಡಿಕೆ: ಸಚಿವ ಯೋಗೀಶ್ವರ್ ಮಾಹಿತಿ

ಚಿಕ್ಕಬಳ್ಳಾಪುರ : ಸೂಕ್ಷ್ಮ ಪರಿಸರ ವಲಯ ಎಂತಲೇ ಗುರುತಿಸಿಕೊಂಡಿರುವ ನಂದಿ ಗಿರಿಧಾಮದ ನೈಜ ವಾತಾವರಣಕ್ಕೆ ಧಕ್ಕೆಯಾಗದಂತೆ ವರ್ಷದೊಳಗೆ ರೋಪ್ ವೇ ಅಳವಡಿಸಲಾಗುತ್ತದೆ. ಹಾಗೆಯೇ ಸರ್ಕಾರಿ ಮತ್ತು ಖಾಸಗಿ ಜಂಟಿ ಸಹಭಾಗಿತ್ವದಲ್ಲಿ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ ಎಂದು ಪರಿಸರ ಮತ್ತು ಜೀವಿಶಾಸ, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ಪ್ರವಾಸಿ ತಾಣದಲ್ಲಿ ಪ್ರಗತಿದಾಯಕ ಕೆಲಸಗಳ ವಿಚಾರವಾಗಿ ಶುಕ್ರವಾರ ನಂದಿ ಗಿರಿಧಾಮದ ನೆಹರೂ ನಿಲಯದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಯೋಗೇಶ್ವರ್, ನಂದಿ ಗಿರಿಧಾಮದ ಪರಿಸರಕ್ಕೆ ಮಾರಕವಾದ ಯಾವುದೇ ಕೆಲಸಗಳನ್ನು ಕೈಗೊಳ್ಳುವುದಿಲ್ಲ. ದೇಶಾದ್ಯಂತ ರೋಪ್ ವೇ ನಿರ್ಮಾಣದಲ್ಲಿ ಅನುಭವವಿರುವ ಸಂಸ್ಥೆಯ ಮೂಲಕ ಕೈಗೊಂಡ ಅಧ್ಯಯನದ ಆಧಾರದ ಮೇಲೆಯೇ ಸುರಕ್ಷತೆ, ತಾಂತ್ರಿಕತೆ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತದೆ ಎಂಬ ಸ್ಪಷ್ಟನೆ ನೀಡಿದರು.

ಕರ್ನಾಟಕದಲ್ಲಿ ಎಲ್ಲೂ ರೋಪ್ ವೇ ನಿರ್ಮಾಣವಾಗಿಲ್ಲ. ಇಲ್ಲಿ ಮೊದಲ ಬಾರಿಗೆ ಸ್ಥಾಪನೆಯಾಗುತ್ತಿರುವುದು ಖುಷಿಯ ವಿಚಾರ. ಆದರೆ, ಬಂಡವಾಳ ಹೂಡಿಕೆ ಮತ್ತು ನಿರ್ವಹಣೆ ಸರ್ಕಾರವೊಂದರಿಂದಲೇ ಸಾಧ್ಯವಿಲ್ಲ, ಇದೇ ಕಾರಣದಿಂದಾಗಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಲವು ಹಂತದ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ ಎಂದು ವಿವರಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧೂ ರೂಪೇಶ್, ಕೆಎಸ್‌ಟಿಡಿಸಿ ಅಧ್ಯಕ್ಷ ಕಾಪು ಸಿದ್ಧಲಿಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ವಿಜಯಶರ್ಮಾ, ಜೆಎಲ್‌ಆರ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ಗಣಪತಿ ಶಾಸಿ, ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಜಿತೇಂದ್ರನಾಥ್, ಐಡೆಸ್ಕ್ ರೋಪ್ ವೇ ಸಂಸ್ಥೆ ಮುಖ್ಯಸ್ಥ ಲಾಲ್ ಮತ್ತಿತರರು ಇದ್ದರು.