ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರಿ ಕಾಲೇಜುಗಳ ಆರಂಭಕ್ಕೆ ಸಾಕಷ್ಟು ಕೋರಿಕೆಗಳು ಬಂದಿದೆ. ಆದರೆ ನಮ್ಮ ಇಲಾಖೆಯಲ್ಲೇ ಸದ್ಯ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಅವುಗಳನ್ನು ಪರಿಹರಿಸಲಾಗುವುದು. ಮುಂದಿನ ವರ್ಷದೊಳಗೆ ಕೆಲವು ಕಾಲೇಜುಗಳು ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜು ಆರಂಭ ವಿಚಾರವಾಗಿ ಹಿಂದಿನ ಸರ್ಕಾರ ಮುತುವರ್ಜಿ ವಹಿಸಿ ಒಳ್ಳೆ ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ಅವರು ಪಠ್ಯದಲ್ಲಿ ಭಾವನಾತ್ಮಕ ವಿಷಯ ಸೇರಿಸಿದರು. ಚುನಾವಣೆ ಉದ್ದೇಶಕ್ಕೆ ಏನೇನೊ ಸೇರಿಸುವ ಕೆಲಸ ಮಾಡಿದರು. ಅದು ಹೊಲಸು ಕೆಲಸ ಎಂದು ಕಿಡಿಕಾರಿದರು.
ಮಕ್ಕಳ ಪರ ಇರುವ ಶಿಕ್ಷಣ ನೀಡುವುದು ಇಲಾಖೆ ಕರ್ತವ್ಯ. ಇಲಾಖೆಯಲ್ಲಿ ನೂನ್ಯತೆಗಳು ಇರುವುದನ್ನು ಒಪ್ಪುತ್ತೇನೆ. ಅವುಗಳನ್ನು ಸರಿಪಡಿಸುತ್ತಿದ್ದೇವೆ. 32 ಸಾವಿರ ಶಿಕ್ಷಕರ ವರ್ಗಾವಣೆ ಮಾಡಿದ್ದು, ಅನೇಕ ಹುದ್ದೆ ಖಾಲಿ ಆಗಿವೆ. ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಆದರೆ ಶಾಶ್ವತ ಶಿಕ್ಷಕರ ನೇಮಕಾತಿ ಆಗಬೇಕಿದೆ. ಈ ಕುರಿತು 10 ದಿನಗಳಲ್ಲಿ ಮುಖ್ಯಮಂತ್ರಿ ಜತೆಗೆ ಸಭೆ ನಡೆಸಲಾಗುವುದು ಎಂದರು.
ವರ್ಗಾವಣೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸುವ ಬಿಜೆಪಿಗರಿಗೆ ಸ್ವಲ್ಪ ಕಾಮನ್‌ಸೆನ್ಸ್ ಇರಲಿ. ವರ್ಗಾವಣೆ ಕೌನ್ಸೆಲಿಂಗ್ ಮೂಲಕ ನಡೆಯುತ್ತದೆ. ಆದರೂ ಆರೋಪ ಮಾಡಿದ್ದಾರೆ. ಸದ್ಯ ಬಿಜೆಪಿಯಲ್ಲಿ ಏನೂ ಉಳಿದಿಲ್ಲ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ನಾಯಕರಿಗೆ ಸರಿಯಾದ ಸ್ಥಾನ ಕೊಟ್ಟಿದ್ದಾರೆ. ಮಣಿಪುರದಲ್ಲಿ ಜನ ಸತ್ತರೂ ಬೇಸರ ಮಾಡಿಕೊಳ್ಳದ ಪ್ರಧಾನಿ, ಯಾರೋ ಸಾಧನೆ ಮಾಡಿದರೆ ಅಲ್ಲಿ ಬರ್ತಾರೆ. ಜನರ ತೆರಿಗೆ ಹಣದಲ್ಲಿ ಮಾಡಿದ ಕೆಲಸಕ್ಕೆ ಪ್ರಚಾರ ಪಡೆಯುತ್ತಾರೆ. ಆದರೆ ಮಣಿಪುರ ಬಗ್ಗೆ ಮಾತನಾಡುತ್ತಿಲ್ಲ. ಇಸ್ರೋಗೆ ತೋರಿದ ಕಾಳಜಿಯನ್ನು ಮಣಿಪುರಕ್ಕೂ ತೋರಿಸಬೇಕಿತ್ತು ಎಂದು ಟೀಕಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ ಅವರೇ ಮೊದಲು ಅರ್ಜಿ ಹಾಕಿದ್ದಾರೆ. ಬಸ್‌ನಲ್ಲಿ ಹೆಚ್ಚು ಉಚಿತ ಪ್ರಯಾಣ ಮಾಡುವವರು ಅವರ ಕುಟುಂಬಸ್ಥರೇ. ಇದಕ್ಕೆ ನಮ್ಮ ವಿರೋಧ ಇಲ್ಲ. ಅವರು ನಮ್ಮ ಪ್ರಜೆಗಳು ಎಂಬ ಭಾವನೆ ನಮ್ಮಲ್ಲಿದೆ. ಹೀಗಾಗಿ ಟೀಕೆ ನಿಲ್ಲಿಸಿ ನಮ್ಮ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಿ. ನಾವು ನುಡಿದಂತೆ ನಡೆದಿದ್ದೇವೆ ಎಂದ ಅವರು, ಬೇರೆ ಬೇರೆಯವರು ಪಕ್ಷಕ್ಕೆ ಬರಬೇಕು. ಪಕ್ಷದ ಸಿದ್ಧಾಂತ ಒಪ್ಪಿ ಬರುವವರು ಬರಲಿ ಎಂದರು.