ಬ್ಯಾಕೋಡು: ಶರಾವತಿ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಲಾಂಚ್ ಸೇರಿದಂತೆ ಶರಾವತಿ ಹಿನ್ನೀರಿನ ಮುಪ್ಪಾನೆ, ಹಸಿರುಮಕ್ಕಿ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರುವ ಲಾಂಚ್‌ನ ಹೊರಗುತ್ತಿಗೆ ನೌಕರರಿಗೆ ಒಂದು ವರ್ಷದಿಂದ ಸಂಬಳವನ್ನೇ ನೀಡಿಲ್ಲ.
ವರ್ಷ ಕಳೆದರೂ ಸಂಬಳ ಪಾವತಿ ಮಾಡದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಶುಕ್ರವಾರ ಜನಪರ ಹೋರಾಟ ವೇದಿಕೆ ಪದಾಧಿಕಾರಿಗಳು ಹೊಳೆಬಾಗಿಲು ಬಳಿ ಲಾಂಚ್ ತಡೆದು ಪ್ರತಿಭಟನೆ ನಡೆಸಿದರು.
ಲಾಂಚ್‌ನ ಅರೆಕಾಲಿಕ ಸಿಬ್ಬಂದಿ ವೇತನ ಪಾವತಿಗೆ ಸೆ.20ರ ಗಡುವು ನಿಗದಿಪಡಿಸಲಾಯಿತು. ಅಷ್ಟರೊಳಗೆ ವೇತನ ನೀಡಿದ್ದರೆ ಸೆ.22ರಂದು ಲಾಂಚ್ ತಡೆದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ನಡೆಸಲು ಜನಪರ ಹೋರಾಟ ವೇದಿಕೆ ಮತ್ತು ಕಾಗೋಡು ಜನಪರ ವೇದಿಕೆ ನೇತೃತ್ವದಲ್ಲಿ ತೀರ್ಮಾನಕ್ಕೆ ಬರಲಾಯಿತು.
ಜನಪರ ಹೋರಾಟ ವೇದಿಕೆಯ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಮಾತನಾಡಿ, ದ್ವೀಪದ ಜನರು ಮತ್ತು ಸಿಗಂದೂರು ದೇವಾಲಯಕ್ಕೆ ಬರುವ ಭಕ್ತಾದಿಗಳನ್ನು ಲಾಂಚ್ ಸಿಬ್ಬಂದಿ ಸುರಕ್ಷಿತವಾಗಿ ದಡ ಸೇರಿಸುತ್ತಿದ್ದಾರೆ. ಇವರ ಸೇವೆ ನಿರ್ಣಾಯಕವಾದುದು. ಆದರೆ ಇಲಾಖೆ ಸಂಬಳ ನೀಡದೆ ಸರ್ಕಾರಿ ಜೀತಕ್ಕೆ ಇಟ್ಟುಕೊಂಡಿದೆ ಎಂದು ಕಿಡಿಕಾರಿದರು.
ಕಾಗೋಡು ಜನಪರ ವೇದಿಕೆಯ ಅಧ್ಯಕ್ಷ ಜಾಕಿ ಗಣೇಶ್ ಮಾತನಾಡಿ, ಸಂಬಳ ನೀಡದೆ ಇರುವ ಬಗ್ಗೆ ಯಾರಿಗೂ ಹೇಳಬಾರದೆಂದು ಇಲಾಖೆ ಸಿಬ್ಬಂದಿ ಮೇಲೆ ಒತ್ತಡ ಹೇರಿದೆ. ಇದೇ ಕಾರಣಕ್ಕೆ 12 ತಿಂಗಳು ಕಳೆದರೂ ಯಾರಿಗೂ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳ ಈ ಧೋರಣೆ ಖಂಡನೀಯ ಎಂದರು.