ಜಿಲ್ಲೆ

ವರ್ಷದಿಂದ ನಿಂತಿಲ್ಲ ಜಲ ಕಂಟಕ

Dharwad

ಹುಬ್ಬಳ್ಳಿ: ನಗರದ ಕೇಶ್ವಾಪುರ ಬೆಂಗೇರಿ ಮುಖ್ಯ ರಸ್ತೆಯ ಪಾರಸವಾಡಿ ಕ್ರಾಸ್​ನಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಭೂಮಿಯೊಳಗಿಂದ ಜಿನುಗುತ್ತಿರುವ ನೀರು ಕಟ್ಟಡ ಮಾಲೀಕರ ನಿದ್ದೆಗೆಡಿಸಿದೆ. ಹು-ಧಾ ಮಹಾನಗರ ಪಾಲಿಕೆಯಿಂದಾಗಲಿ ಅಥವಾ ಜಲ ಮಂಡಳಿಯಿಂದಾಗಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

‘ಮಠದ ಕಾರ್ನರ್’ ಹೆಸರಿನ ವಸತಿ ಹಾಗೂ ವಾಣಿಜ್ಯ ಕಟ್ಟಡದ ಮಾಲೀಕರು ಜಲ ಕಂಟಕದಿಂದ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಕಟ್ಟಡದ ಸೆಲ್ಲರ್ ಹಾಗೂ ನೆಲಮಹಡಿಯಲ್ಲಿ ತಲಾ 5 ಅಂಗಡಿಗಳಿವೆ. ಉಳಿದ 2 ಮಹಡಿಗಳಲ್ಲಿ ಮಾಲೀಕರದ್ದು ಸೇರಿ ಹಲವು ಮನೆಗಳಿವೆ. ಸೆಲ್ಲರ್​ಗೆ ಇಳಿಯಲು ಇರುವ ಮೆಟ್ಟಿಲುಗಳು ಮುಂದಿನ ರಸ್ತೆಗೆ ಹೊಂದಿಕೊಂಡಿದ್ದು, ಅಲ್ಲಿಂದಲೇ ಹಗಲು-ರಾತ್ರಿಯೆನ್ನದೇ ನೀರು ಒಸರಿ, 1-2 ಗಂಟೆಯಲ್ಲಿ 2 ಸಾವಿರ ಲೀ. ಸಾಮರ್ಥ್ಯದ ನೆಲ ಮಟ್ಟದ ಟ್ಯಾಂಕ್ ಭರ್ತಿಯಾಗುತ್ತದೆ. ಅದನ್ನು ಹೊರಗೆ ಚೆಲ್ಲುವುದೇ ಮಾಲೀಕರ ದಿನಚರಿಯಾಗಿದೆ.

ಹೀಗೆ ಒಸರುವ ನೀರಿನ ಮೂಲ ಯಾವುದು ಎಂಬುದನ್ನು ಪತ್ತೆ ಮಾಡುವುದೇ ಸವಾಲಾಗಿದೆ. ಇದು ಒಳಚರಂಡಿ ನೀರೋ? ಕುಡಿಯುವ ನೀರಿನ ಪೈಪ್​ಲೈನ್ ಸೋರುವಿಕೆಯೋ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಸಂಬಂಧ ಕಟ್ಟಡದ ಮಾಲೀಕರಾದ ಇಂದುಧರ ಮಠದ ಹಾಗೂ ಪಂಚಾಕ್ಷರಿ ಮಠದ ಪಾಲಿಕೆ ವಲಯ ಕಚೇರಿ (ನಂ. 6), ಜಲ ಮಂಡಳಿ ಹಾಗೂ ನಿರಂತರ ನೀರು ಪೂರೈಕೆ ಯೋಜನಾ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ.

ಬಹುತೇಕ ಬಹು ಮಹಡಿ ಕಟ್ಟಡಗಳ ಸೆಲ್ಲರ್​ನಲ್ಲಿ ಮಳೆ ನೀರು ಸಂಗ್ರಹಕ್ಕೆ ನೆಲ ಮಟ್ಟದ ಟ್ಯಾಂಕ್ ಇರುತ್ತದೆ. ಹಾಗೇ ಇಲ್ಲಿಯೂ ಇದೆ. ಈ ಟ್ಯಾಂಕ್​ಗೆ ಹೊಂದಿಕೊಂಡಿರುವ ಗೋಡೆಯಿಂದಲೇ ನೀರು ಜಿನುಗಿ, ಟ್ಯಾಂಕ್​ನಲ್ಲಿ ಸಂಗ್ರಹವಾಗುತ್ತದೆ. ಆ ನೀರನ್ನು ಮೇಲಕ್ಕೆ ಎತ್ತಿ ಗಟಾರಕ್ಕೆ ಹರಿಸಲು ಕಟ್ಟಡದ ಮಾಲೀಕರು 1ಹಾಗೂ 0.5 ಅಶ್ವಶಕ್ತಿಯ 2 ಮೋಟಾರ್ ಅಳವಡಿಸಿದ್ದಾರೆ. ಟ್ಯಾಂಕ್ ಭರ್ತಿಯಾದಾಗ ಸ್ವಯಂ ಚಾಲೂ ಆಗುವ ಪಂಪ್, ನೀರು ಖಾಲಿಯಾದಾಗ ಸ್ವಯಂ ಬಂದ್ ಆಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯುತ್ ನಿಲುಗಡೆಯಾದರೆ ಜನರೇಟರ್ ವ್ಯವಸ್ಥೆ ಮಾಡಿದ್ದಾರೆ.

‘ಕಳೆದ ವರ್ಷ ಜುಲೈಯಲ್ಲಿ ಭರ್ಜರಿ ಮಳೆಯಾದಾಗಿನಿಂದ ಈ ಸಮಸ್ಯೆ ಆರಂಭವಾಗಿದೆ. ವಿದ್ಯುತ್ ಕೈ ಕೊಟ್ಟರೆ ಜನರೇಟರ್ ಚಾಲೂ ಮಾಡಲು ಹಗಲು-ರಾತ್ರಿಯೆನ್ನದೇ ಎಲ್ಲಿದ್ದರೂ ಓಡಿ ಬರಬೇಕು. ಇಲ್ಲದಿದ್ದರೆ ಟ್ಯಾಂಕ್ ಭರ್ತಿಯಾಗಿ ಸೆಲ್ಲರ್​ನಲ್ಲಿರುವ ಅಂಗಡಿಗಳಿಗೆ ನೀರು ನುಗ್ಗುತ್ತದೆ. ಈ ನೀರಿನ ಕಿರಿಕಿರಿಯಿಂದಾಗಿ ಮೂವರು ಬಾಡಿಗೆದಾರರು ಅಂಗಡಿ ಖಾಲಿ ಮಾಡಿದ್ದಾರೆ’ ಎಂದು ಇಂದುಧರ ಮಠದ ಹೇಳಿದರು.

ಈ ನೀರಿನ ಗುಣಮಟ್ಟವನ್ನು ಖಾಸಗಿ ಏಜೆನ್ಸಿಯಿಂದ ಪರೀಕ್ಷೆ ಮಾಡಿಸಲಾಗಿತ್ತು. ಬಟ್ಟೆ ತೊಳೆಯಲು ಬಳಸಬಹುದು, ಕುಡಿಯಲು ಯೋಗ್ಯವಲ್ಲ ಎಂದು ಅವರು ವರದಿ ನೀಡಿದ್ದಾರೆ. ಬೆಂಗೇರಿ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಬ್ಲಾಕ್ ಆದಾಗ ಇಲ್ಲಿ ನೀರು ಒಸರುವ ಪ್ರಮಾಣ ಅಧಿಕವಾಗಿರುತ್ತದೆ ಎಂದರು.

‘ಈ ಸಮಸ್ಯೆ ಪರಿಶೀಲಿಸಲು ನಾನೇ ಸ್ವತಃ ಸ್ಥಳಕ್ಕೆ ಹೋಗಿದ್ದೆ. ಯುಜಿಡಿ ಸೋರುವಿಕೆ ಏನೂ ಇಲ್ಲ. ಕೇಶ್ವಾಪುರ ಸವೋದಯ ವೃತ್ತದಿಂದ ಬೆಂಗೇರಿಯವರೆಗೆ ಹೊಸದಾಗಿ ಯುಜಿಡಿ ಕೊಳವೆ ಮಾರ್ಗದ ಕಾಮಗಾರಿ ಇನ್ನು 10 ದಿನಗಳಲ್ಲಿ ಚಾಲು ಆಗಲಿದೆ. ಆಗ, ನಿಖರವಾಗಿ ಗೊತ್ತಾಗಲಿದೆ. ಆದಾಗ್ಯೂ ಈಗಾಗಲೇ ಸಮಸ್ಯೆಯನ್ನು ಜಲಮಂಡಳಿ ಗಮನಕ್ಕೆ ತರಲಾಗಿದೆ. ವಿಠ್ಠಲ ತುಬಾಕೆ, ಪಾಲಿಕೆ ವಲಯ ಅಧಿಕಾರಿ