ಜಿಲ್ಲೆ

ವರ್ಷದಲ್ಲಿ ಹುಬ್ಬಳ್ಳಿ- ಧಾರವಾಡ ಧೂಳು ಮುಕ್ತ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಒಂದು ವರ್ಷದಲ್ಲಿ ಧೂಳು ಮುಕ್ತವಾಗಲಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಅನುದಾನದಡಿ 43.48 ಕೋಟಿ ರೂ. ವೆಚ್ಚದಲ್ಲಿ ರೈಲು ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ- 63ರ ರೈಲ್ವೆ ಕೆಳ ಸೇತುವೆಯಿಂದ ಕೇಶ್ವಾಪುರ, ನಾಗಶೆಟ್ಟಿಕೊಪ್ಪ, ಬೆಂಗೇರಿ, ಗೋಪನಕೊಪ್ಪ, ಗಂಗೂಬಾಯಿ ಹಾನಗಲ್ ಗುರುಕುಲ ಮಾರ್ಗವಾಗಿ ಉಣಕಲ್ ಕೆರೆ ರಸ್ತೆ ಸೇರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಗರೋತ್ಥಾನ ಯೋಜನೆಯಡಿ 100 ಕೋಟಿ ವೆಚ್ಚದಲ್ಲಿ ನಗರದ ಒಳ ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರು ಕೂಡ ರಸ್ತೆ ಕಾಮಗಾರಿ ಗುತ್ತಿಗೆದಾರರಿಗೆ ಸಹಕರಿಸಬೇಕು. ಸಂಚಾರ ಪೊಲೀಸರು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ: ಫೆ. 14ರಂದು ಹುಬ್ಬಳ್ಳಿಯಲ್ಲಿ ಇನ್​ವೆಸ್ಟ್ ಕರ್ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮುಂಬೈನ ಹಲವು ಉದ್ಯಮಿಗಳನ್ನು ಭೇಟಿ ಮಾಡಿ ಹುಬ್ಬಳ್ಳಿಗೆ ಆಗಮಿಸಲು ಆಹ್ವಾನಿಸಿದ್ದೇವೆ. ಹಿಂದುಜಾ, ಮಹೀಂದ್ರಾ, ಟಾಟಾ, ಗೋದ್ರೇಜ್ ಸೇರಿ ಹಲವು ಕಂಪನಿಗಳು ಹುಬ್ಬಳ್ಳಿಗೆ ಆಗಮಿಸಲು ಒಪ್ಪಿವೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕೇಶ್ವಾಪುರ ರಸ್ತೆ ಕಾಮಗಾರಿ 2017ರಲ್ಲೇ ಆರಂಭವಾಗಬೇಕಿತ್ತು. ಹಿಂದಿನ ರಾಜ್ಯ ಸರ್ಕಾರದ ನಿರ್ಲಕ್ಷ್ಯಂದಾಗಿ ನನೆಗುದಿಗೆ ಬಿದ್ದಿತ್ತು. 28 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ನಾನು, ಜಗದೀಶ ಶೆಟ್ಟರ್, ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಈ ಎಲ್ಲ ರಸ್ತೆಗಳನ್ನು ಡಾಂಬರ್ ಬದಲು ಸಿಮೆಂಟ್ ರಸ್ತೆಗೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದೆವು. ಅದಕ್ಕೆ ಒಪ್ಪಿದ ಗಡ್ಕರಿಯವರು 500 ಕೋಟಿ ರೂ. ಬಿಡುಗಡೆಗೆ ಅನುಮತಿ ನೀಡಿದ್ದರು ಎಂದು ಸ್ಮರಿಸಿದರು. ಸ್ಟಾರ್ ಏರ್ ಸಂಸ್ಥೆ ಜತೆ ಈ ವಾರ ಮಾತುಕತೆ ನಡೆಸಲಿದ್ದು, ವಾರಕ್ಕೆ ಮೂರು ದಿನ ಸಂಚರಿಸುತ್ತಿರುವ ಹುಬ್ಬಳ್ಳಿ- ದೆಹಲಿ (ಹಿಂಡಾನ್) ವಿಮಾನ ವಾರಪೂರ್ತಿ ಸಂಚರಿಸುವಂತೆ ಒತ್ತಾಯಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಬೆಳಗಾವಿಯ ರಸ್ತೆಗಳು ಅಭಿವೃದ್ಧಿ ಹೊಂದಿವೆ. ಹು-ಧಾ ರಸ್ತೆಗಳು ಧೂಳಿನಿಂದ ಕೂಡಿವೆ. ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣ. ಇದೀಗ ಶೆಟ್ಟರ್ ಹಾಗೂ ಜೋಶಿ ಅವರ ಆಸಕ್ತಿಯಿಂದ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ಹಾಗಾಗಿ, ಅವರಿಗೆ ಅಭಿನಂದನೆಗಳು. ಚುನಾವಣೆ ಬಂದರೆ ಪರಸ್ಪರ ವಿರೋಧಿಸುವ ಹಳೇ ಮೈಸೂರು ಭಾಗದ ರಾಜಕಾರಣಿಗಳು ನಂತರ ಅಭಿವೃದ್ಧಿಗೆ ಒಂದಾಗುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದವರು ಒಂದಾಗಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಮಾಜಿ ಮೇಯರ್​ಗಳಾದ ಡಿ.ಕೆ. ಚವ್ಹಾಣ, ಸುಧೀರ ಸರಾಫ, ನಾಗೇಶ ಕಲಬುರ್ಗಿ, ಮಹೇಂದ್ರ ಕೌತಾಳ, ಸಂತೋಷ ಚವ್ಹಾಣ, ರವಿ ನಾಯಕ, ಶಿವು ಮೆಣಸಿನಕಾಯಿ, ಮೇನಕಾ ಹುರಳಿ ಇದ್ದರು.

3 ತಿಂಗಳಲ್ಲಿ ಫ್ಲೈ ಓವರ್: ಎನ್​ಎಚ್218, ಎನ್​ಎಚ್ 4, ಕುಸುಗಲ್ ರಸ್ತೆ, ಗದಗ ರಸ್ತೆ, ಕಲಘಟಗಿ ರಸ್ತೆ ಫ್ಲೈ ಓವರ್ ಕಾಮಗಾರಿ ಗಜಪ್ರಸವದಂತಾಗಿತ್ತು. ಇದೀಗ ಕ ೊನೇ ಹಂತಕ್ಕೆ ಬಂದಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜೋಶಿ ಭರವಸೆ ನೀಡಿದರು.

ಅಮೃತ ಯೋಜನೆ, ಸಚಿವ ಪ್ರಲ್ಹಾದ ಜೋಶಿ ಬೇಸರ: ಧಾರವಾಡದಲ್ಲಿ ನಡೆಯುತ್ತಿರುವ ಅಮೃತ ಯೋಜನೆ ಕಾಮಗಾರಿ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೇಸರ ವ್ಯಕ್ತಪಡಿಸಿದರು. ‘ಕೆಲಸ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ಅಲ್ಲಿನ ಕಳಪೆ ಕಾಮಗಾರಿಗೆ ಬೇಸರವಾಯಿತು. ಹೊಸ ಒಳಚರಂಡಿ ಸಂಪೂರ್ಣ ಕುಸಿದು ಹೋಗಿತ್ತು. ಸರ್ಕಾರದ ಹಣ ವ್ಯರ್ಥವಾಗಬಾರದು. ಎಲ್ಲೆಂದರಲ್ಲಿ ರಸ್ತೆ ಅಗೆಯಬಾರದು. ಗುಣಮಟ್ಟದ ಕಾಮಗಾರಿ ಮಾಡಬೇಕು’ ಎಂದು ಸೂಚಿಸಿದರು.

3 ದಿನಕ್ಕೊಮ್ಮೆ ಕುಡಿಯುವ ನೀರು: 26 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ ಮಲಪ್ರಭಾ ನದಿಯಿಂದ ಮಹಾನಗರಕ್ಕೆ ಹೆಚ್ಚುವರಿ ಕುಡಿಯುವ ನೀರು ಸರಬರಾಜು ಯೋಜನೆ ಭರದಿಂದ ಸಾಗಿದೆ. ಜನವರಿ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ನಂತರ 40 ಎಂಎಲ್​ಡಿ ನೀರು ಪೂರೈಕೆಯಾಗಲಿದೆ. ಫೆಬ್ರವರಿ ಎರಡನೇ ವಾರದಿಂದ ಹು-ಧಾ ಮಹಾನಗರದಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಸಲಾಗುವುದು. ಎಲ್ಲ ವಾರ್ಡ್​ಗಳಲ್ಲೂ 24/7 ಯೋಜನೆ ವಿಸ್ತರಣೆಗಾಗಿ ವಿಶ್ವ ಬ್ಯಾಂಕ್​ನಿಂದ 700 ಕೋಟಿ ರೂ. ಬಿಡುಗಡೆಗೆ ಅನುಮತಿ ದೊರೆತಿದೆ. ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಶೆಟ್ಟರ್ ಭರವಸೆ ನೀಡಿದರು.

ಹೊರಟ್ಟಿಗೆ ಶೆಟ್ಟರ್ ಆಹ್ವಾನ !: ರಾಜ್ಯದಲ್ಲಿ ಶೇ. 100ರಷ್ಟು ಭದ್ರ ಸರ್ಕಾರವಿದೆ. ಆ ಬಗ್ಗೆ ಅನುಮಾನ ಬೇಡ. ಬಿಜೆಪಿ ಎಲ್ಲರನ್ನೂ ಹೊಟ್ಟೆಗೆ ಹಾಕಿಕೊಂಡು ಜೀರ್ಣಿಸಿಕೊಂಡಿದೆ. ಬಸವರಾಜ ಹೊರಟ್ಟಿ ಬಂದರೆ ಅವರಿಗೂ ದೀಕ್ಷೆ ಕೊಡುತ್ತೇವೆ ಎಂದು ಶೆಟ್ಟರ್ ನಗೆ ಚಟಾಕಿ ಹಾರಿಸಿದರು. ಪ್ರತಿಕ್ರಿಯಿಸಿದ ಹೊರಟ್ಟಿ, ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ ಎಲ್ಲರೂ ಜನತಾ ಪರಿವಾರದಿಂದ ಬಂದವರು ಎಂದರು. ಮತ್ತೆ ಉತ್ತರಿಸಿದ ಶೆಟ್ಟರ್, ನೀವೊಬ್ಬರು ಬಾಕಿ ಉಳಿದುಕೊಂಡಿದ್ದೀರಿ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ತಿಂಗಳಿಗೆ ಸಾವಿರ ರೂ. ಲಂಚ !: ಚನ್ನಮ್ಮ ವೃತ್ತದ ಮಿರ್ಜಾನಕರ ಪೆಟ್ರೋಲ್ ಬಂಕ್ ಬಳಿ ಮೊನ್ನೆ ಒಬ್ಬ ರಸ್ತೆ ಮಧ್ಯದಲ್ಲೇ ಟೆಂಪೋ ನಿಲ್ಲಿಸಿದ್ದರಿಂದ ನಮ್ಮ ಕಾರು ಟ್ರಾಫಿಕ್​ನಲ್ಲಿ ಸಿಲುಕಿತ್ತು. ನನ್ನ ಗನ್ ಮ್ಯಾನ್ ಕಳುಹಿಸಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೆ. ಆತ ಹೇಳಿದ್ದನ್ನು ಕೇಳಿ ಆಶ್ಚರ್ಯವಾಯಿತು. ‘ತಿಂಗಳಿಗೆ 1 ಸಾವಿರ ರೂ. ಪೊಲೀಸರಿಗೆ ಕೊಡುತ್ತೇವೆ ಮತ್ಯಾಕೆ ದಂಡ ಕಟ್ಟಬೇಕು ಎಂದ’. ಹೀಗಾದರೆ ನಗರ ಉದ್ಧಾರ ಆಗುವುದು ಯಾವಾಗ ಎಂದು ಹೊರಟ್ಟಿ ಪ್ರಶ್ನಿಸಿದರು.