ಗುಂಡ್ಲುಪೇಟೆ ತಾಲೂಕಿನ ಸೋಮನಪುರ ಗ್ರಾಮದಲ್ಲಿ ಉದ್ಘಾಟನೆಗೆ ಕಾದಿರುವ ವಾಲ್ಮಿಕಿ ಸಮುದಾಯ ಭವನ. 
ಜಿಲ್ಲೆ

ವರ್ಷಗಳೇ ಕಳೆದರೂ ಉದ್ಘಾಟನೆಯಾಗದ ಸಮುದಾಯ ಭವನ

ಗುಂಡ್ಲುಪೇಟೆ: ತಾಲೂಕಿನ ಸೋಮನಪುರ ಗ್ರಾಮದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣವಾಗಿ ವರ್ಷಗಳೇ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಪಾಳು ಬೀಳುತ್ತಿರುವ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಕೊಡಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ ಹಿಂದುಳಿದ ವರ್ಗಕ್ಕೆ 314 ಕುಟುಂಬವಿದ್ದು, 1,046 ಜನಸಂಖ್ಯೆಯಿದೆ. ಗ್ರಾಮದಲ್ಲಿ ಎಸ್‌ಟಿ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದರಿಂದ ಸಮುದಾಯದ ಅಭಿವೃದ್ಧಿಗೆ ಅಂದಿನ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಾಲ್ಮಿಕಿ ಸಮುದಾಯ ಭವನ ಕಟ್ಟಡ ಮಂಜೂರು ಮಾಡಿಸಿದ್ದರು. 2017ರ ಫೆಬ್ರವರಿಯಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಕೆಆರ್‌ಎಡಿಎಲ್‌ಗೆ ಕಾಮಗಾರಿಯ ಗುತ್ತಿಗೆ ನೀಡಿದ್ದರು. ಕಾಲಮಿತಿಯಲ್ಲಿ ನಿರ್ಮಿಸಿ ಬಳಕೆಗೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಆದರೆ ಅದೇ ವರ್ಷ ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತು. ಆ ಬಳಿಕ ಉಪ ಚುನಾವಣೆಯಲ್ಲಿ ಜಯಗಳಿಸಿದ ಅವರ ಪತ್ನಿ ಡಾ.ಗೀತಾ ಮಹದೇವಪ್ರಸಾದ್ ಕಾಮಗಾರಿಗೆ ಹೆಚ್ಚುವರಿಯಾಗಿ 2.87 ಲಕ್ಷ ರೂ . ನೀಡಲಾಗಿ ಕಾಮಗಾರಿಯೂ ಪೂರ್ಣಗೊಂಡರೂ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಜಿತರಾಗಿದ್ದರಿಂದ ಭವನಕ್ಕೆ ಉದ್ಘಾಟನೆ ಭಾಗ್ಯ ದೊರಕಲಿಲ್ಲ.

2019ರಲ್ಲಿ ಬಿಜೆಪಿಯ ಸಿ.ಎಸ್.ನಿರಂಜನಕುಮಾರ್ ಶಾಸಕರಾಗಿ ಆಯ್ಕೆಯಾದ ನಂತರ ಹೆಚ್ಚುವರಿಯಾಗಿ 10 ಲಕ್ಷ ರೂ.ಅನುದಾನ ನೀಡಿ ಅಡುಗೆ ಮನೆ ನಿರ್ಮಾಣ ಮಾಡಿ ಉದ್ಘಾಟನೆಗೆ ಮುಂದಾಗಿದ್ದರು. ಆದರೆ ಭವನದ ಸುತ್ತಲಿನ ಭೂಮಿಯನ್ನು ಸಮತಟ್ಟುಗೊಳಿಸಿ ಸುತ್ತಲೂ ಕಾಂಪೌಂಡ್ ಹಾಕಿಸುವಂತೆ ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರಿಂದ ಕಟ್ಟಡದ ಉದ್ಘಾಟನೆ ಮತ್ತೊಮ್ಮೆ ಮುಂದೂಡಿಕೆಯಾಗಿತ್ತು. ಕೆ.ಆರ್.ಐ.ಡಿ.ಎಲ್. ಸಂಸ್ಥೆಯು 2020 ರಲ್ಲಿಯೇ ಕೊಡಸೋಗೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದರೂ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿದ್ದ ಭವನದ ಸುತ್ತಲೂ ಗಿಡಗಂಟಿಗಳು ಬೆಳೆದು ಕಟ್ಟಡ ಪಾಳುಬೀಳುತ್ತಿದೆ. ಜತೆಗೆ ಹಾವು ಚೇಳುಗಳ ಆವಾಸ ಸ್ಥಾನವಾಗಿದೆ.

ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿರಂಜನಕುಮಾರ್ ವಿರುದ್ಧ ಮಹದೇವಪ್ರಸಾದ್ ಹಾಗೂ ಡಾ.ಗೀತಾ ಮಹದೇವಪ್ರಸಾದ್ ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ಜಯಗಳಿಸಿ ಶಾಸಕರಾಗಿದ್ದಾರೆ. ಮೂರು ಶಾಸಕರ ಅವಧಿಯಲ್ಲಿಯೂ ಉದ್ಘಾಟನೆ ಕಾಣದ ಕಟ್ಟಡಕ್ಕೆ ನಾಲ್ಕನೇ ಶಾಸಕರಿಂದಲಾದರೂ ಭಾಗ್ಯ ದೊರಕಿ ಬಳಕೆಗೆ ಬರಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಟ್ಟಡದ ನಿರ್ಮಾಣ ಮಾಡುವ ಸಂಬಂಧ ಗುತ್ತಿಗೆ ಕಾರ್ಯ ಪೂರ್ಣಗೊಳಿಸಿದ ನಂತರ 2020ರಲ್ಲಿಯೇ ಭವನವನ್ನು ಕೊಡಸೋಗೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ.
ಮಹದೇವಶೆಟ್ಟಿ ಸಹಾಯಕ ನಿರ್ದೇಶಕ, ಕೆಆರ್‌ಐಡಿಎಲ್

ವಾಲ್ಮೀಕಿ ಭವನ ಸಮುದಾಯದ ಜನರಿಗೆ ಅಗತ್ಯವಿದ್ದು, ಅದನ್ನು ಉದ್ಘಾಟಿಸುವ ಹಾಗೂ ಬಳಕೆಗೆ ತರುವ ಕುರಿತು ಕ್ರಮ ಕೈಗೊಳ್ಳಲಾಗುವುದು.
ಎಚ್.ಎಂ.ಗಣೇಶ್ ಪ್ರಸಾದ್ ಶಾಸಕರು