ಜಿಲ್ಲೆ

ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಕ್ರಮ ಅನಿವಾರ್ಯ

ಸಕಲೇಶಪುರ: ಅರಣ್ಯ ಇಲಾಖೆಯವರೇನು ರೌಡಿಗಳೇನ್ರಿ, ಹಳ್ಳಿ ಜನರ ಮೇಲೆ ದೊಣ್ಣೆ ಎತ್ತಿಕೊಂಡು ಹೋಗುತ್ತೀರಲ್ಲ. ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಸಿಮೆಂಟ್ ಮಂಜು ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ, ಅರಣ್ಯ ಇಲಾಖೆಯವರು ಮೇಲಿನಿಂದ ಇಳಿದು ಬಂದವರ, ಸಾರ್ವಜನಿಕರ ಸೇವೆಗೆ ನಿಮ್ಮನ್ನು ನೇಮಿಸಿರುವುದು. ಸಾರ್ವಜನಿಕರ ಹಣದಿಂದಲೇ ನಿಮಗೆ ಸಂಬಳ ನೀಡುವುದು. ಹಳ್ಳಿ ಜನರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲು ನಿಮಗ್ಯಾರ‌್ರಿ ಅಧಿಕಾರ ನೀಡಿದ್ದು, ಗ್ರಾಮಕ್ಕೆ ತೆರಳುವ ವೇಳೆ ದೊಣ್ಣೆ ಹಿಡಿದುಕೊಳ್ಳಬಹುದೇನ್ರಿ. ತಾಲೂಕಿನಲ್ಲಿ ಎಲ್ಲಿ ನೋಡಿದ್ರೂ ನಿಮ್ಮದೆ ಸಮಸ್ಯೆ. ನಿಮ್ಮಿಂದ ತಾಲೂಕಿನ ಅಭಿವೃದ್ಧಿಯೇ ಕುಂಠಿತಗೊಂಡಿದೆ. ರಸ್ತೆ ಮಾಡಲು ಹೋದ್ರೆ ಅಡ್ಡಿಪಡಿಸುತ್ತಿರ, ಜನರು ಪ್ರವಾಸಿ ತಾಣಗಳಿಗೂ ಹೋಗದಂತೆ ಮಾಡಿದ್ದೀರಾ, ಕುಡಿಯುವ ನೀರಿನ ಯೋಜನೆಗೂ ಅಡ್ಡಿಪಡಿಸುತ್ತೀರಾ. ಕನಿಷ್ಠ ಅರ್ಧ ಅಡಿ ಜಾಗದಲ್ಲಿ ಕೊರೆಯಲಾಗುವ ಕೊಳವೆ ಬಾವಿಗೂ ಅಡ್ಡಿಪಡಿಸುತ್ತೀರಾ ಎಂದರೆ ನಿಮಗೇನು ಹೇಳುವುದು ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಅರಣ್ಯವೇ ಹೆಚ್ಚಿದೆ. ನೀವು ಹುಟ್ಟುವ ಪೂರ್ವದಿಂದಲೂ ಜನರು ಇಲ್ಲೇ ವಾಸಿಸುತ್ತಿದ್ದಾರೆ. ಈಗ ನಿಮಗೆ ಅನುಕೂಲವಾಗುವಂತಹ ಕಾನೂನು ಮಾಡಿಕೊಂಡು ಎಲ್ಲ ಕೆಲಸಕ್ಕೂ ಅಡ್ಡಿಪಡಿಸುತ್ತಿದ್ದೀರಾ? ಇಲ್ಲಿರುವವರನ್ನು ಎಲ್ಲಿಗೆ ಕಳುಹಿಸುವುದು. ತಾಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಬೆಳೆಯುವುದನ್ನೇ ರೈತರು ಬಿಟ್ಟಿದ್ದಾರೆ. ಅಳಿದುಳಿದ ರೈತರು ಅಲ್ಪಸ್ವಲ್ಪ ಬೆಳೆ ಬೆಳೆಯುತ್ತಿದ್ದಾರೆ. ಅದನ್ನು ಕಾಡುಹಂದಿಗಳು ತಿಂದು ಹಾಳು ಮಾಡುತ್ತಿವೆ. ಬೆಳೆ ಹಾಳು ಮಾಡುವ ವೇಳೆ ಹಂದಿ ಕೊಂದವರ ಮೇಲೆ ಕಠಿಣ ಸೆಕ್ಷನ್‌ಗಳನ್ನು ಹಾಕಿ ಜೈಲಿಗೆ ಹಾಕಿಸುವಷ್ಟು ಕ್ರೋರತನ ಏಕೆ? ಕನಿಷ್ಠ ಮನುಷ್ಯತ್ವ ಇಟ್ಟುಕೊಂಡು ಕೆಲಸ ಮಾಡಿ ಎಂದು ಯಸಳೂರು ವಲಯ ಅರಣ್ಯಾಧಿಕಾರಿ ಕೃಷ್ಣ ಹಾಗೂ ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್ ಅವರನ್ನು ತರಾಟೆ ತೆಗೆದುಕೊಂಡರು.

ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿಗಳು, ಹಲ್ಲೆ ಪ್ರಕರಣಕ್ಕೆ ವಿಷಾದವಿದೆ ಸಾರ್, ಮುಂದೆ ಹೀಗೆ ನಡೆಯಲು ಬಿಡುವುದಿಲ್ಲ. ಕಾಮಗಾರಿ ಅಡ್ಡಿ ವಿಚಾರದಲ್ಲಿ ಇದುವರೆಗೆ ಆಗಿದ್ದು ಬಿಡಿ ಸಾರ್, ಮುಂದೆ ಯಾವುದೇ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳುತ್ತೇವೆ. ಹಂದಿ ಕೊಂದ ಪ್ರಕರಣದಲ್ಲಿ ಗ್ರಾಮಸ್ಥರೇ ದೂರು ನೀಡುತ್ತಿದ್ದಾರೆ. ನಾವು ಕ್ರಮ ಕೈಗೊಳ್ಳದಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗಲಿದೆ. ಆದ್ದರಿಂದ, ಕ್ರಮ ಅನಿವಾರ್ಯವಾಗಿದೆ ಎಂದರು.

ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿ ಕುಂಠಿತಗೊಂಡಿದ್ದು, ಅರಣ್ಯ ಇಲಾಖೆ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಮತ್ತು ಸೆಸ್ಕ್ ಅಧಿಕಾರಿಗಳು ಜೋಡೆತ್ತಿನಂತೆ ಕೆಲಸ ಮಾಡಿದರೆ ಕಾಮಗಾರಿಗಳು ಈ ವೇಳೆಗೆ ಮುಕ್ತಾಯಗೊಳ್ಳಲಿದ್ದವು. ಆದರೆ, ನಿಮ್ಮಲ್ಲಿ ಹೊಂದಾಣಿಕೆ ಕೊರತೆ ಕಾಡುತ್ತಿದೆ. ಕುಡಿಯುವ ನೀರಿನ ಇಲಾಖೆಯವರೇನು ಅವರ ಮನೆ ಕಾಮಗಾರಿ ಮಾಡುತ್ತಿದ್ದಾರ, ಇಲ್ಲದ ಕಾರಣ ನೀಡಿ ವಿದ್ಯುತ್ ಸಂಪರ್ಕ ಏಕೆ ನೀಡುತ್ತಿಲ್ಲ ಎಂದು ಸೆಸ್ಕ್ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.

ಇನ್ನು ಹದಿನೈದು ದಿನಗಳ ಒಳಗಾಗಿ ಎಲ್ಲ ಕುಡಿಯುವ ನೀರಿನ ಘಟಕಗಳಿಗೂ ಸಂಪರ್ಕ ಕಲ್ಪಿಸಬೇಕು ಎಂದರು.

ಸೆಸ್ಕ್ ಎಇಇ ಹರೀಶ್ ಮಾತನಾಡಿ, ಸರ್ಕಾರದಿಂದ ನಮಗೆ ಹಣ ಬಿಡುಗಡೆಯಾಗಿಲ್ಲ, ಆ ಕಾರಣದಿಂದ ಸಂಪರ್ಕ ವಿಳಂಬವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಬೆಟ್ಟದ ಬೈರವೇಶ್ವರ ದೇವಸ್ಥಾನ ಸಮೀಪ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವೀಕ್ಷಣಾ ಗೋಪುರ ಕಾಮಗಾರಿ ಶೇ.60ರಷ್ಟು ಮುಕ್ತಾಯಗೊಂಡಿದೆ. ಈಗ ಅರಣ್ಯ ಇಲಾಖೆ ಅಧಿಕಾರಿಗಳ ಕಾಮಗಾರಿ ಸ್ಥಗಿತಗೊಳಿಸಿದ್ದಾರೆಂದು ಗ್ರಾಮೀಣ ರಸ್ತೆ ಅಭಿವೃದ್ಧಿ ಇಲಾಖೆ ಎಇಇ ನವ್ಯಶ್ರೀ ಶಾಸಕರಲ್ಲಿ ದೂರು ನೀಡಿದರು.

ಇದಕ್ಕೆ ಕೆಂಡಮಂಡಲರಾದ ಶಾಸಕ, ಏಕೆ ಕೆಲಸ ನಿಲ್ಲಿಸಿದ್ದಿರಾ, ಹಾಗಾದರೆ ಈ ಜಾಗ ನಿಮ್ಮದು ಎನ್ನಲು ಏನಿದೆ ದಾಖಲೆ ತನ್ನಿ ಎಂದು ಸಕಲೇಶಪುರ ವಲಯ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದ ಒಂದು ಯೋಜನೆ ಜಾರಿಯಾಗುವ ಮೊದಲು ಸ್ಥಳದ ಸಂಪೂರ್ಣ ವಿವರ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿರುತ್ತದೆ, ಮತ್ತೆ ಜಾಗದ ವಿವಾದ ಮಾಡುತ್ತೀರಾ. ಕಾಮಗಾರಿ ಸ್ಥಳಕ್ಕೆ ನಾನು ಬರುತ್ತೇನೆ ಕೆಲಸ ಆರಂಭಿಸಿ ಎಂದು ಕೆಆರ್‌ಡಿಎಲ್ ಅಧಿಕಾರಿಗೆ ತಾಕೀತು ಮಾಡಿದರು.

ತಾಲೂಕಿನ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಲಂಚದ ಹಾವಳಿ ಹೆಚ್ಚಿದೆ. ಭಾಗ್ಯಲಕ್ಷ್ಮೀ ಬಾಂಡ್ ನೀಡಲು ಬೇಡಿಕೆ ಇಡುತ್ತಿದ್ದಾರೆಂಬ ದೂರನ್ನು ಸಾರ್ವಜನಿಕರು ನೀಡಿದ್ದಾರೆ. ಅಂಗನವಾಡಿಗಳ ನಿರ್ವಹಣೆ ಸರಿ ಇಲ್ಲ ಎಂಬ ಆರೋಪವಿದೆ. ಕೆಲವು ಅಂಗನವಾಡಿಗಳಲ್ಲಿ ಮಕ್ಕಳು ಬಾರದಿದ್ದರೂ ಸಂಬಳ ಮಾತ್ರ ಪಡೆಯಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಕ್ರಮ ಅನಿವಾರ್ಯವಾಗಲಿದೆ ಎಂದು ಇಲಾಖೆ ಅಧಿಕಾರಿಯ ಉಮಾ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉದಯ, ತಹಸೀಲ್ದಾರ್ ಮೇಘನಾ, ಇಒ ಗಂಗಾಧರ್, ನಾಮನಿರ್ದೇಶಕ ಸದಸ್ಯರಾದ ಕೊಮಾರಯ್ಯ,ಪ್ರೇಮಕುಮಾರ್, ರವಿಕುಮಾರ್ ಹಾಜರಿದ್ದರು.