ದಾವಣಗೆರೆ: ಜಿಎಸ್‌ಟಿ ವಿಚಾರದಲ್ಲಿ ಇಲಾಖೆ ನೋಟಿಸ್ ನೀಡಿದಾಕ್ಷಣ ವರ್ತಕರು, ಉದ್ಯಮಿಗಳಲ್ಲಿ ಗಾಬರಿ-ಆತಂಕ ಅನಗತ್ಯ ಎಂದು ಬೆಂಗಳೂರಿನ ಲೆಕ್ಕ ಪರಿಶೋಧಕ ಜತಿನ್ ಕ್ರಿಸ್ಟೋಫರ್ ಹೇಳಿದರು.
ತೆರಿಗೆ ಸಲಹೆಗಾರರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳಿಗಾಗಿ ಜಿಎಸ್‌ಟಿ ಶೋಕಾಸ್ ನೋಟಿಸ್ ಮತ್ತು 2023-24ರ ಹೊಸ ತಿದ್ದುಪಡಿಗಳು ಕುರಿತು ನಗರದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಸೋಮವಾರ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಜಿಎಸ್‌ಟಿ ಭರಿಸುವ ಎಲ್ಲ ವಿಧದ ವ್ಯಾಪಾರಸ್ಥರಿಗೂ ನೋಟಿಸ್ ಸರ್ವೇಸಾಮಾನ್ಯ. ಇದರ ಬಗ್ಗೆ ಭಯ ಪಡಬೇಕಿಲ್ಲ. ಯಾವ ಸೆಕ್ಷನ್ ಅಡಿಯಲ್ಲಿ ಮತ್ತು ಯಾರು ಇದನ್ನು ನೀಡಿದ್ದಾರೆ ಎಂಬುದನ್ನು ತಿಳಿದು ಸಮರ್ಪಕ ಉತ್ತರ ನೀಡುವತ್ತ ಗಮನ ಹರಿಸಬೇಕು ಎಂದರು.
ತಪ್ಪು ಮಾಡಲಿ, ಬಿಡಲಿ ನೋಟಿಸ್‌ಗಳು ಬರುತ್ತವೆ. ಇದರ ಕುರಿತಂತೆ ಅಧಿಕಾರಿ ವರ್ಗದಲ್ಲೂ ಸಾಕಷ್ಟು ಗೊಂದಲವಿದೆ. ಅನೇಕ ನೋಟಿಸ್‌ಗಳು ತಪ್ಪಿನಿಂದಲೂ ಚಲಾಯಿಸಲ್ಪಡುತ್ತವೆ. ನೋಟಿಸ್ ಕಳಿಸುವ ವಿಚಾರದಲ್ಲಿ ಅಧಿಕಾರಿಗಳೂ ಕಲಿಯುತ್ತಿದ್ದಾರೆ. ಕಾನೂನು ಕ್ರಮ ಮೀರಿ ನೋಟಿಸ್ ನೀಡಿದಲ್ಲಿ ಆಕ್ಷೇಪಣೆ ಸಲ್ಲಿಸುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ ವಿವಿಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ನಂತರ ಮಾತನಾಡಿ, ತೆರಿಗೆ ಸಲಹೆಗಾರರ ಸಂಘಕ್ಕೆ ಜಮೀನು ಮಂಜೂರಾಗಿದೆ. ಶೀಘ್ರವೇ ಕಟ್ಟಡ ನಿರ್ಮಾಣವಾಗಲಿ. ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
1965-70ರ ದಶಕದಲ್ಲಿ ಆಡಿಟ್ ಪ್ರಕ್ರಿಯೆ ಕಠಿಣವಾಗಿತ್ತು. ತಂತ್ರಜ್ಞಾನ ಮುಂದುವರಿದಂತೆ ಲೆಕ್ಕ ಮಾಡುವ ಪ್ರಕ್ರಿಯೆಗಳು ಸರಳ ಹಾಗೂ ಸುಲಭವಾಗುತ್ತಿದೆ. ಇಂದಿನ ದಿನಗಳಲ್ಲಿ ನಿತ್ಯವೂ ಹೊಸ ನೀತಿ, ಕಾಯ್ದೆಗಳು ಬದಲಾಗುತ್ತಿವೆ. ಹೀಗಾಗಿ ತೆರಿಗೆ ಸಲಹೆಗಾರರು ನಿತ್ಯದ ಕೆಲಸಗಳ ಜತೆಗೆ ಅಪ್‌ಡೇಟ್ ಆಗುವುದು ಮುಖ್ಯ ಎಂದು ಹೇಳಿದರು.
ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಉಪಾಧ್ಯಕ್ಷ ಎಚ್.ಎಸ್.ಮಂಜುನಾಥ್, ಕಾರ್ಯದರ್ಶಿ ಡಿ.ಎಂ. ರೇವಣಸಿದ್ದಯ್ಯ, ಸಿ. ವಿಜಯ್, ಬಿ. ವಿನಯಕುಮಾರ್ ಇದ್ದರು.
---