ಅಜ್ಜಂಪುರ: ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕೊಡುಗೆ ನೀಡುವುದಾಗಿ ವರ್ತಕರ ಸಂಘದ ಪದಾಧಿಕಾರಿಗಳು ತಿಳಿಸಿದರು. ಬಸವೇಶ್ವರ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ನಡೆಸಿದ ಜನಸಂಪರ್ಕ ಸಭೆಯಲ್ಲಿ ಸಂಘ-ಸಂಸ್ಥೆಯವರು ಈ ಭರವಸೆ ನೀಡಿದರು.
ಸುರೇಶ್ ಮಾತನಾಡಿ, ಸಂತೆ ಮೈದಾನ, ಬಸ್ ಮತ್ತು ರೈಲ್ವೆ ನಿಲ್ದಾಣ, ಎಪಿಎಂಸಿಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಮದ್ಯದ ಬಾಟಲಿ, ಪೌಚ್ಗಳನ್ನು ಎಸೆದು ಅನೈರ್ಮಲ್ಯ ಉಂಟುಮಾಡುತ್ತಿದ್ದಾರೆ. ಆಗಾಗ ಜಗಳವಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ತಡೆಯುವಂತೆ ಮನವಿ ಮಾಡಿದರು.
ಪಿಎಸ್ಐ ಜಿ.ಕೆ.ಬಸವರಾಜು ಮಾತನಾಡಿ, ಪಟ್ಟಣದಲ್ಲಿ ಬೈಕ್ ಕಳವು, ಮನೆ ಕಳವು, ಗಾಂಜಾ, ಅಫೀಮು ಮಾರಾಟ, ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಇವರಿಗೆಲ್ಲ ಕಡಿವಾಣ ಹಾಕಲು ಸಿಸಿ ಟಿವಿಯನ್ನು ಆ.15ರಂದು ಅಳವಡಿಸಲಾಗುವುದು ಎಂದರು.
ಎಸ್ಐ ಲಿಂಗರಾಜು ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಅಪಘಾತ ಸಂಖ್ಯೆ ಹೆಚ್ಚಿದೆ. ಚಾಲಕರು ಸಂಚಾರ ನಿಯಮ ಪಾಲಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ 10 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಆಟೋ ಚಾಲಕ-ಮಾಲೀಕರ ಸಂಘ, ವರ್ತಕರ ಸಂಘ, ಸಾರ್ವಜನಿಕರು ಸಿಸಿ ಟಿವಿ ಕ್ಯಾಮರಾ ಕೊಡುಗೆ ನೀಡುವುದಾಗಿ ತಿಳಿಸಿದರು.