ಹಾಸನ: ಕಳೆದ ಎರಡು ತಿಂಗಳಿನಿಂದ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ತಲೆದೋರಿತ್ತು. ಇದೀಗ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಮಳೆಯಿಂದ ಮನೆ, ಮಠ ಕಳೆದುಕೊಂಡವರಿಗೆ ಹಾಗೂ ಗಾಯಗೊಂಡವರಿಗೆ ಸರ್ಕಾರ ಕೂಡಲೇ ಪರಿಹಾರ ವಿತರಣೆ ಮಾಡಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಅವರು ಆಗ್ರಹಿಸಿದರು.
ಮಳೆಯಿಂದ ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಪರಿಹಾರ ನೀಡಿದ್ದಾರೆ. ಅದೇ ರೀತಿ ಗಾಯಗೊಂಡವರಿಗೂ ಪರಿಹಾರ ನೀಡಬೇಕು. ಮಳೆಯಿಂದ ಹಾನಿಗೊಂಡಿರುವ ರಸ್ತೆಗಳು, ಸೇತುವೆಗಳನ್ನು ಶೀಘ್ರವೇ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಬೇಕು ಎಂದು ರೇವಣ್ಣ ಅವರು ಬುಧವಾರ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಕಳೆದ ಅವಧಿಯಲ್ಲಿ ನೀಡಿದ್ದ ಅನುದಾನಗಳಿಗೆ ತಡೆ ಹಾಕಲಾಗಿದೆ. ದೇವಸ್ಥಾನ ನಿರ್ಮಾಣದ ಅನುದಾನವನ್ನು ಕೂಡ ತಡೆಹಿಡಿದಿದ್ದಾರೆ. ಇವರು ಹೊಸ ಅನುದಾನ ಕೊಡುವುದು ಬೇಡ. ಶಾಸಕರ ಅನುದಾನವನ್ನಾದರೂ ನೀಡಲಿ. ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಕೆಲವು ಗುತ್ತಿಗೆದಾರರ ಹಣ ಇನ್ನೂ ಮಂಜೂರು ಆಗಿಲ್ಲ ಎಂದು ಹೇಳಿದರು.
ಮಳೆ ನಿರ್ವಹಣೆ, ಪರಿಹಾರ ವಿತರಣೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಆದರೆ, ಇಂತಹ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲಿ ಪಿಡಿಒಗಳೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಈ ಎರಡು ತಿಂಗಳ ಅವಧಿಯಲ್ಲಿ ಸುಮಾರು 660 ಪಿಡಿಒಗಳ ವರ್ಗಾವಣೆ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲೇ ಸುಮಾರು 70 ಪಿಡಿಒಗಳನ್ನು ಬೇರೆಡೆಗೆ ವರ್ಗ ಮಾಡಿದ್ದಾರೆ. ಹೆಣ್ಣು ಮಕ್ಕಳನ್ನು ಸಹ ರಾಜ್ಯದ ಗಡಿ ಭಾಗಗಳಿಗೆ, ಉತ್ತರ ಕರ್ನಾಟಕ ಭಾಗಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ವರ್ಗಾವಣೆಯಿಂದ ಹೆದರಿಸಲು ಸಾಧ್ಯವಿಲ್ಲ
ವರ್ಗಾವಣೆ ಮೂಲಕ ನಮ್ಮನ್ನು ಹೆದರಿಸಬಹುದು ಎಂದು ಅವರು ತಿಳಿದುಕೊಂಡಿದ್ದರೆ ಅದು ಅವರ ಭ್ರಮೆ. ಜಿಲ್ಲೆಗೆ ಯಾರೇ ಬಂದರೂ ಅವರಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದು ನಮಗೆ ಗೊತ್ತು. ನಾನು 25 ವರ್ಷ ಶಾಸಕನಾಗಿ ಕೆಲಸ ಮಾಡಿದವನು. ಇಂತಹವುಗಳಿಗೆ ಹೆದರಿಕೊಂಡು ಓಡಿಹೋಗುದಿಲ್ಲ. ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡಿದ್ದವರನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಆರ್‌ಡಿಪಿಆರ್‌ನಲ್ಲಿ ಈ ಮೊದಲು ಪಿಡಿಒ, ಎಫ್‌ಡಿಎ, ಎಸ್‌ಡಿಎಗಳ ವರ್ಗಾವಣೆ ಮಾಡುವ ಅಧಿಕಾರ ಜಿಪಂ ಸಿಇಒಗೆ ಇತ್ತು. ಈಗ ಮಂತ್ರಿಗಳೇ ವರ್ಗಾವಣೆ ದಂಧೆ ಮಾಡುತ್ತಾ ಇದ್ದಾರೆ. ವರ್ಗಾವಣೆಗೆ ಇಂತಿಷ್ಟು ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೋ ಏನೋ ಎಂಬುದು ಗೊತ್ತಿಲ್ಲ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.
ಬಿಜೆಪಿ ಕೋಮುವಾದಿ ಪಕ್ಷ, ಭ್ರಷ್ಟ ಪಕ್ಷ ಎಂದು ಹೇಳುತ್ತಾರೆ. ಹಾಗಾದರೆ ಈಗ ಇವರು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದ ರೇವಣ್ಣ, ಅಂದು ಬಿಜೆಪಿ ಮಾಡಿದ ತಪ್ಪಿಗೆ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರದ ಪರಿಸ್ಥಿತಿ ಕೂಡ ಮುಂದೆ ಏನಾಗುತ್ತದೆ ಎಂದು ಕಾದು ನೋಡಿ. ಸಮಯ ಬಂದಾಗ ಜನರೇ ಈ ಸರ್ಕಾರವನ್ನು ಕಿತ್ತೊಗೆಯುತ್ತಾರೆ ಎಂದು ಭವಿಷ್ಯ ನುಡಿದರು.