ಜಿಲ್ಲೆ

ವರ್ಗಾವಣೆ ಕಾಯ್ದೆಗೆ ಶಿಕ್ಷಕರ ಸಂಘದ ಆಕ್ಷೇಪ

ಚಿಂತಾಮಣಿ: ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗೆ ಕಾಯ್ದೆ 2020ರ ಕರಡು ನಿಯಮವನ್ನು ಅನುಸರಿಸುತ್ತಿರುವ ಸರ್ಕಾರದ ಕ್ರಮಕ್ಕೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಅಶೋಕ್ ಕುಮಾರ್ ನೇತೃತ್ವದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮುಖಾಂತರ ಗುರುವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯ ಮುಖ್ಯ ಶಿಕ್ಷಕರ ವೇದಿಕೆ ಸಂಚಾಲಕ ಕೆ.ವಿ.ಚೌಡಪ್ಪ ಮಾತನಾಡಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕಾಯ್ದೆ 2020ರ ಕರಡು ನಿಯಮಕ್ಕೆ ಶಿಕ್ಷಕರ ಆಕ್ಷೇಪಗಳನ್ನು ಪುರಸ್ಕರಿಸಿ ಶಿಕ್ಷಕ ಸ್ನೇಹಿ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು.

ವಿಧವೆ-ವಿಧುರ, ಅಂಗವಿಕಲರು, ಮಾರಣಾಂತಿಕ ಕಾಯಿಲೆ ಪ್ರಕರಣಗಳನ್ನು ಹೊರತು ಪಡಿಸಿ ವರ್ಗಾವಣೆ ಶೇಕಡಾ ಮಿತಿಯನ್ನು ಉಳಿದೆಲ್ಲ ಪ್ರಕರಣಗಳಿಗೆ ಸಮಾನ ಅವಕಾಶ ಕಲ್ಪಿಸುವುದು, ಪರಸ್ಪರ ವರ್ಗಾವಣೆ, ಯಾವುದೇ ನಿಬಂಧನೆ ಇಲ್ಲದೆ ವರ್ಗಾವಣೆಗೆ ಅವಕಾಶ ಕಲ್ಪಿಸುವುದು, ವರ್ಗಾವಣೆ ಮಿತಿಯನ್ನು ಶೇಖಡವಾರು ಪ್ರಮಾಣ ಹೆಚ್ಚಿಸುವುದು, ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಾಗಿರುವ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡುವುದು ಸೇರಿ ಇನ್ನಿತರೆ ಸಮಸ್ಯೆಗಳ ಬಗ್ಗೆ ಮನವಿಯಲ್ಲಿ ವಿವರಿಸಿರುವುದಾಗಿ ಹೇಳಿದರು.

ಬಿಇಒ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ನಾಗರಾಜ್, ರಾಜ್ಯ ಸಹಕಾರ್ಯದರ್ಶಿ ಎನ್.ದಾಮೋದರ ರೆಡ್ಡಿ, ತಾಲೂಕು ಉಪಾಧ್ಯಕ್ಷ ವಿ.ಗಂಗುಲಪ್ಪ, ಕೆ.ಸಿ.ಚಂದ್ರಮ್ಮ, ಸಹಕಾರ್ಯದರ್ಶಿ ಸಿ.ಎಸ್.ಈರಪ್ಪರೆಡ್ಡಿ, ಎನ್.ಕಲ್ಪನಾ, ಜಿಲ್ಲಾ ಉಪಾಧ್ಯಕ್ಷ ವಿ.ರಮೇಶ್, ಸದಸ್ಯರಾದ ದಶರಥ, ಭಾರತಿ ಜೈಯರಮರೆಡ್ಡಿ, ಮಂಜುಳಾದೇವಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಚಂದ್ರಶೇಖರ್, ಶಿಕ್ಷಕರಾದ ಶ್ರೀನಿವಾಸ್, ಶ್ರೀನಿವಾಸರೆಡ್ಡಿ, ಆಂಜನೇಯ ಪ್ರಸಾದ್ ಇತರರಿದ್ದರು.