ಜಿಲ್ಲೆ

ವರೂರಲ್ಲಿ ಕನ್ನಡ ಡಿಂಡಿಮ

ಹುಬ್ಬಳ್ಳಿ: ನವಗ್ರಹ ತೀರ್ಥ ಕ್ಷೇತ್ರ ವರೂರ ಗ್ರಾಮದಲ್ಲಿ ಭಾನುವಾರ ಕನ್ನಡ ಹಬ್ಬ ಅದ್ದೂರಿಯಾಗಿ ಜರುಗಿತು. ಕನ್ನಡದ ಬಾವುಟ ಹಿಡಿದ ಚಿಣ್ಣರು ಕುಣಿದು ಕುಪ್ಪಳಿಸಿದರು. ಇಳಕಲ್ ಸೀರೆಯುಟ್ಟ ಮಹಿಳೆಯರ ಜನಪದ ನಡಿಗೆ ಎಲ್ಲರ ಮನಸೂರೆಗೊಂಡಿತು. ಸಮ್ಮೇಳನಾಧ್ಯಕ್ಷರ ಎತ್ತಿನ ಗಾಡಿ ಮೆರವಣಿಗೆ ಕಣ್ಮನ ಸೆಳೆಯಿತು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ವರೂರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ ಗ್ರಾಮೀಣ ತಾಲೂಕು 8ನೇ ಸಾಹಿತ್ಯ ಸಮ್ಮೇಳನದಲ್ಲಿ ಕಂಡು ಬಂದ ದೃಶ್ಯವಿದು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೃಹತ್ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳು ಜರುಗಿದವು.

ಸಮ್ಮೇಳನ ಸರ್ವಾಧ್ಯಕ್ಷ ಪ್ರೊ. ಜಿ.ಬಿ. ವೀರಭದ್ರಯ್ಯನವರ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕಾದರೆ, ಕನ್ನಡ ಶಾಲೆಗಳು ಅಭಿವೃದ್ಧಿಯಾಗಲೇಬೇಕು. ಜನರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಸೌಲಭ್ಯಗಳಿಲ್ಲ ಎಂದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಾರೆ. ಸರ್ಕಾರಿ ಕನ್ನಡ ಶಾಲೆ ಅಭಿವೃದ್ಧಿಯಾದರೆ, ಸಹಜವಾಗಿಯೇ ರಾಜ್ಯದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ದೊರೆಯಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಗಿನ ಶಿಕ್ಷಣ ಪದ್ಧತಿ ಮತ್ತು ಆಧುನಿಕ ಜೀವನ ಶೈಲಿ. ಶಿಕ್ಷಕರಿಗೆ ಸಾಹಿತ್ಯದಲ್ಲಿ ಆಸಕ್ತಿ, ಅಭಿಮಾನ ಇರಬೇಕು. ಅಂತಹ ಶಿಕ್ಷಕರು ಮಾತ್ರ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಾಹಿತಿಗಳು ಸಮಾಜದಲ್ಲಾಗುತ್ತಿರುವ ಬದಲಾವಣೆ ಕುರಿತು ಬರೆಯಬೇಕು. ಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ನಮ್ಮ ನಾಡು, ನುಡಿ, ಸಂಸ್ಕೃತಿ ಬಗ್ಗೆ ಅಭಿಮಾನ ಮೂಡುವಂತೆ ಮಾಡಬೇಕು ಎಂದು ಸಾಹಿತಿಗಳಿಗೆ ಕಿವಿಮಾತು ಹೇಳಿದರು.

ಸಮ್ಮೇಳನದಲ್ಲಿ ಬಸನಗೌಡ ಪೊಲೀಸ್ ಪಾಟೀಲ ರಚನೆಯ ‘ಆಧುನಿಕ ವಚನಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು. ವರೂರು, ಕಂಪ್ಲಿಕೊಪ್ಪ ಗ್ರಾಮಗಳ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿ.ವಿ. ಹಿರೇಮಠ ನಿರ್ದೇಶನದಲ್ಲಿ ಪ್ರೊ.ಆರ್.ಎನ್. ಕುಲಕರ್ಣಿ ರಚನೆಯ ಹಾಸ್ಯಭರಿತ ನಾಟಕ ‘ಹೆಂಡತಿಯೇ ನಿನಗೆ ನಮೋ ನಮಃ’ ಪ್ರದರ್ಶನಗೊಂಡಿತು.

ನವಗ್ರಹ ತೀರ್ಥದ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯರು, ವೀರೇಶ್ವರ ಶಾಂತಾಶ್ರಮದ ಶ್ರೀ ವಿರೂಪಾಕ್ಷಯ್ಯ ಹಿರೇಮಠ ಶರಣರು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ತಾಲೂಕು ಅಧ್ಯಕ್ಷ ಡಾ. ರಾಮು ಮೂಲಗಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಜಿಪಂ ಮಾಜಿ ಸದಸ್ಯೆ ಚನ್ನಮ್ಮ ಶಿವನಗೌಡ್ರ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ, ಪ್ರೇಮಾ ಕಡಪಟ್ಟಿ, ಪ್ರೊ. ಕೆ.ಎಸ್. ಕೌಜಲಗಿ, ಮೋಹನ ಮಿಸ್ಕಿನ್, ಗಂಗಾಧರ ಗಾಣಗೇರ, ಮಹೇಶ ಪತ್ತಾರ, ಅಮೃತ ಇಜಾರಿ, ಗುರು ಹಿರೇಮಠ, ಬಿ.ಎಸ್. ಮಾಳವಾಡ ಮತ್ತಿತರರು ಉಪಸ್ಥಿತರಿದ್ದರು.

ವಿಆರ್​ಎಲ್ ಮಾದರಿ ಕೈಗಾರಿಕೆ ಆರಂಭವಾಗಲಿ: ಗ್ರಾಮೀಣ ಜನರ ಬದುಕು ಉತ್ತಮವಾಗಬೇಕೆಂದರೆ ಹಳ್ಳಿಗಳಲ್ಲಿ ಸಣ್ಣ ಕೈಗಾರಿಕೆಗಳು ಆರಂಭವಾಗಬೇಕು. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು. ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿರುವ ವಿಆರ್​ಎಲ್ ಸಮೂಹ ಸಂಸ್ಥೆ ವರೂರಲ್ಲಿದೆ. ಅದಕ್ಕಾಗಿ ವಿಆರ್​ಎಲ್ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ನನ್ನ ಅಭಿನಂದನೆಗಳು. ಇದೇ ಮಾದರಿಯಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ ಬೇರೆ ಬೇರೆ ಕೈಗಾರಿಕೆಗಳು ಪ್ರಾರಂಭವಾಗಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಪ್ರೊ. ಜಿ.ಬಿ. ವೀರಭದ್ರಯ್ಯನವರ ಅಭಿಪ್ರಾಯಪಟ್ಟರು.

ಗ್ರಾಮಸ್ಥರ ಸಹಕಾರ: ಸಮ್ಮೇಳನದ ಆಯೋಜಕರು ಮಧ್ಯಾಹ್ನ ಊಟಕ್ಕಾಗಿ ಗೋದಿ ಹುಗ್ಗಿ, ಮುಳಗಾಯಿ ಪಲ್ಯ, ಅನ್ನ, ಸಾಂಬಾರು ವ್ಯವಸ್ಥೆ ಮಾಡಿಸಿದ್ದರು. ಉಳಿದಂತೆ ಗ್ರಾಮದ ನೂರಾರು ಮಹಿಳೆಯರು ಮನೆಯಿಂದ ರೊಟ್ಟಿ, ಬಗೆ ಬಗೆಯ ಪಲ್ಯ, ಉಪ್ಪಿನಕಾಯಿ, ಚಟ್ನಿ ಪುಡಿ ಮಾಡಿಕೊಂಡು ತಂದು ಸ್ವತಃ ತಾವೇ ಬಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.