ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನಲ್ಲಿ ಗುಡುಗು, ಸಿಡಿಲು, ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, 34 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.
ಶುಕ್ರವಾರ ರಾತ್ರಿ 10ರ ನಂತರ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 10.50ಕ್ಕೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು. ಶನಿವಾರ ನಸುಕಿನ 3ಗಂಟೆವರೆಗೂ ಹಲವೆಡೆ ಹದ ಮಳೆಯಾಯಿತು.
ಪೂರ್ವ ಮುಂಗಾರಿನಲ್ಲಿ ವರುಣನ ಕೃಪೆಯಿಂದಾಗಿ ರೈತರ ಮೊಗದಲ್ಲಿ ಈಗಷ್ಟೇ ಮಂದಹಾಸ ಬೀರಲಾರಂಭಿಸಿದ್ದು, ಮುಂಗಾರು ಬಿತ್ತನೆಗೆ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಸನ್ನಧರಾಗಿದ್ದಾರೆ.
ಚಿತ್ರದುರ್ಗ-3, ಚಳ್ಳಕೆರೆ-8, ಹೊಳಲ್ಕೆರೆ-4, ಹೊಸದುರ್ಗ-5, ಹಿರಿಯೂರು-6, ಮೊಳಕಾಲ್ಮೂರು ತಾಲೂಕಿನಲ್ಲಿ 8 ಸೇರಿ ಒಟ್ಟು 34 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ತೋಟಗಾರಿಕೆ 8.28 ಹಾಗೂ ಕೃಷಿ ಸಂಬಂಧ 3 ಹೆಕ್ಟೇರ್ ಸೇರಿ 11.28 ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ನಷ್ಟ ಉಂಟಾಗಿದೆ.
ಜನ, ಜಾನುವಾರು ಸೇರಿ ಯಾವುದೇ ರೀತಿಯ ಜೀವಹಾನಿ, ತೀವ್ರ ತರವಾದ ಮನೆಹಾನಿ ಉಂಟಾಗಿಲ್ಲ. ಮನೆಗೆ ನೀರು ನುಗ್ಗಿರುವ 3 ಪ್ರಕರಣ ಕಂಡು ಬಂದಿದ್ದು, ತಗ್ಗು ಪ್ರದೇಶದಲ್ಲಿ ಇರುವ ಜನರು ಜಾಗರೂಕರಾಗಿ ಇರುವಂತೆ ಮುನ್ಸೂಚನೆ ನೀಡಲಾಗಿದೆ.
ರಾಮಗಿರಿಯಲ್ಲಿ 68.4 ಮಿ.ಮೀ ಮಳೆ: ರಾಮಗಿರಿಯಲ್ಲಿ 68.4 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಶನಿವಾರ ಸುರಿದ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.
ಚಿತ್ರದುರ್ಗ ಭಾಗ 1ರಲ್ಲಿ-38.8, ಭಾಗ 2ರಲ್ಲಿ-44.9, ತುರುವನೂರು-26.4, ಹಿರೇಗುಂಟನೂರು-15.5, ಐನಹಳ್ಳಿ-29.4, ಭರಮಸಾಗರ-25.2, ಸಿರಿಗೆರೆ-43, ಮೊಳಕಾಲ್ಮೂರು-34, ರಾಯಾಪುರ-45.2, ಬಿ.ಜಿ.ಕೆರೆ-38.4, ರಾಂಪುರ-16, ದೇವಸಮುದ್ರ-20.2, ಹಿರಿಯೂರು-34.6, ಸೂಗೂರು-40.2, ಬಬ್ಬೂರು-46.6, ಈಶ್ವರಗೆರೆ-38, ಇಕ್ಕನೂರು-41.4 ಮಿ.ಮೀ ಮಳೆಯಾಗಿದೆ.
ಹೊಸದುರ್ಗ-26.4, ಮಾಡದಕೆರೆ-34.2, ಶ್ರೀರಾಂಪುರ-20, ಚಳ್ಳಕೆರೆ-50, ಪರಶುರಾಂಪುರ-36.4, ನಾಯಕನಹಟ್ಟಿ-65.6, ತಳಕು-51.2, ಡಿ.ಮರಿಕುಂಟೆ-41.2, ಹೊಳಲ್ಕೆರೆ-59.6, ಚಿಕ್ಕಜಾಜೂರು-28.4, ಬಿ.ದುರ್ಗಾ-18.2, ಎಚ್.ಡಿ.ಪುರ-48.6, ತಾಳ್ಯ-10.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.