ಔರಾದ್: ಔರಾದ್ ಮತ್ತು ಕಮಲನಗರ ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆ ಸೇತುವೆಗಳ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಂಡಿದ್ದು, ಬೋಂತಿ ನಾಮಾನಾಯಕ ತಾಂಡಾ ಕೆರೆ ಕುಸಿದು ಸುತ್ತಲಿನ ಹೊಲಗಳಿಗೆ ನೀರು ಹೊಕ್ಕು ಸೋಯಾಬೀನ್ ಸೇರಿ ವಿವಿಧ ಬೆಳೆಗಳು ಹಾನಿಯಾಗುವ ಆತಂಕ ಎದುರಾಗಿದೆ.
ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ಜಾವದವರೆಗೆ ಔರಾದ್ ವಲಯದಲ್ಲಿ ೮೧ ಎಂಎಂ, ಕಮಲನಗರ ೬೬.೮, ಸಂತಪುರ ೪೫, ಠಾಣಾಕುಶನೂರ ೭೧, ಚಿಂತಾಕಿ ೮೭, ದಾಬಕಾ ವಲಯದಲ್ಲಿ ಅತಿ ಹೆಚ್ಚು ೩೦೦.೨ ಎಂಎಂ ಮಳೆಯಾಗಿದ್ದು, ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ಗ್ರಾಮಗಳ ಹೊಲಗಳಲ್ಲಿ ನೀರು ನಿಂತು ಬೆಳೆಗಳು ಕೊಳೆಯಲಾರಂಭಿಸಿವೆ.
ಸಂತಪುರದಿಂದ ಸಂಗಮ ಮತ್ತು ಭಾಲ್ಕಿಗೆ ಸಂಪರ್ಕಿಸುವ ಮಾರ್ಗಮಧ್ಯದ ಠಾಣಾಕುಶನೂರ-ಬೆಡಕುಂದಾ ಹತ್ತಿರದ ಸೇತುವೆ ಮೇಲಿಂದ ನೀರು ಹರಿದಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂದಿ-ಬಿಜಲಗಾಂವ್‌ನಲ್ಲಿ ಕೊಚ್ಚಿ ಹೋದ ರಸ್ತೆ ಸೇತುವೆಯಡಿ ಹತ್ತಾರು ಎಮ್ಮೆಗಳು ಅಸುನೀಗಿರುವ ಮಾಹಿತಿ ಇದೆ.
ಮೆಣಸಿನಕಾಯಿ, ಟೊಮ್ಯಾಟೊ ಈರುಳ್ಳಿ, ಹೂಕೋಸು, ಚಂಡು ಹೂ, ಸೇವಂತಿ ಸೇರಿ ೨೫ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಾನಂದ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಹಾನಿ ವೀಕ್ಷಿಸಿದ ಡಿಸಿ ಶರ್ಮಾ: ಔರಾದ್ ಹಾಗೂ ಕಮಲನಗರ ತಾಲೂಕಿನ ವಿವಿಧೆಡೆ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಬೋಂತಿ, ಬಾವಲಗಾಂವ ಹಾಗೂ ಹಂಗರಗಾ ಗ್ರಾಮದ ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿದ್ದಲ್ಲದೆ ವಿವಿಧೆಡೆ ಸಂಪರ್ಕ ಸೇತುವೆಗಳು ಹಾನಿಯಾಗಿವೆ. ಬೋಂತಿ ನಾಮಾನಾಯಕ ತಾಂಡಾದ ಸಣ್ಣ ನೀರಾವರಿ ಇಲಾಖೆ ಕೆರೆ ಒಡೆದಿದ್ದು, ರಭಸದಿಂದ ಹರಿದ ನೀರಿನಿಂದಾಗಿ ಬಾವಲಗಾಂವ-ಹಂಗರಗಾ ನಡುವಿನ ಸಂಪರ್ಕ ಸೇತುವೆ ಕುಸಿದು ಬೃಹತ್ ಗುಂಡಿ ಬಿದ್ದಿದೆ. ಹೀಗಾಗಿ ಸಾರ್ವಜನಿಕರು ಈ ಕಡೆ ಓಡಾಡದಂತೆ ಡಂಗೂರ ಸಾರಬೇಕು ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಅವರಿಗೆ ಡಿಸಿ ಸೂಚಿಸಿದರು.
ನಾಲ್ಕು ಸಂಪರ್ಕ ಸೇತುವೆ ಭಾಗಶಃ ಹಾನಿಯಾಗಿದ್ದಲ್ಲದೆ ೫೦೦ ಎಕರೆ ಬೆಳೆ ನಷ್ಟ ಅಂದಾಜಿಸಲಾಗಿದೆ. ಮಳೆ ನಿಂತ ನಂತರ ಸಮೀಕ್ಷೆ ನಡೆಸಲಾಗುವುದು. ಸದ್ಯಕ್ಕೆ ಯಾವುದೇ ಜೀವ ಮತ್ತು ಮನೆ ಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ತಿಳಿಸಿದರು.
ನಂತರ ಡಿಸಿ ಶರ್ಮಾ ಕಮಲನಗರ ತಾಲೂಕಿನ ನಂದಿ ಬಿಜಲಗಾಂವದಲ್ಲಿ ಕುಸಿದ ಸೇತುವೆ, ಬೆಳೆ ಮತ್ತು ಮನೆ ಹಾನಿ ವೀಕ್ಷಿಸಿ ಸಮೀಕ್ಷೆ ನಡೆಸಿ ತುರ್ತು ಪರಿಹಾರ ನೀಡುವಂತೆ ತಹಸೀಲ್ದಾರ್ ಅಮೀತ್ ಕುಲಕರ್ಣಿ ಅವರಿಗೆ ಸೂಚಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಸಹಾಯಕ ಆಯುಕ್ತ ಮಹ್ಮದ್ ಶಕೀಲ್, ತಾಪಂ ಇಇ ಕಿರಣ ಪಾಟೀಲ್, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐಗಳಾದ ರಘುವೀರಸಿಂಗ್ ಠಾಕೂರ್, ಶ್ರೀಕಾಂತ ಅಲ್ಲಾಪುರೆ, ಪಿಎಸ್‌ಐ ಶೇಖ್ ಶೈಕ್ ಪಟೇಲ್ ಇತರರಿದ್ದರು.
ಬಾವಲಗಾಂವ-ಹಂಗರಗಾ ಮಧ್ಯದ ಕೆರೆ ಒಡೆದು ನೂರಾರು ಎಕರೆಗೆ ನೀರು ಹೊಕ್ಕಿದ್ದು, ಬೆಳೆಗಳು ಜಲಾವೃತಗೊಂಡಿವೆ. ಬಾವಲಗಾಂವ ಗ್ರಾಮಸ್ಥರಿಗಾಗಿ ಸ್ಥಳೀಯ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಬೇಕು. ನಿರಂತರ ಮಳೆಯಿರುವ ಕಾರಣ ಗ್ರಾಮಸ್ಥರು ಹಾಗೂ ಜನ-ಜಾನುವಾರುಗಳು ನೀರಿನ ಮೂಲಗಳತ್ತ ತೆರಳದಂತೆ ಎಚ್ಚರ ವಹಿಸಬೇಕು.
| ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ
ಮಾಂಜ್ರಾಕ್ಕೆ ಚುಳಕಿನಾಲಾ ನೀರು ಎಚ್ಚರದಿಂದ ಇರಲು ಮನವಿ
ಬೀದರ್: ಬಸವಕಲ್ಯಾಣ ತಾಲೂಕಿನ ಮುಸ್ತಾಪುರ ಹತ್ತಿರದ ಚುಳಕಿನಾಲಾ ಜಲಾಶಯ ಮೇಲ್ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಒಳಹರಿವು ಹೆಚ್ಚುತ್ತಿದ್ದು, ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದೆ. ಗರಿಷ್ಠ ಮಟ್ಟ ಕಾಯ್ದುಕೊಂಡು ಗೇಟ್‌ಗಳನ್ನು ತೆರೆದು ಮಾಂಜ್ರಾ ನದಿಗೆ ನೀರು ಹರಿಸಲಿದ್ದು, ಕೆಳಭಾಗದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಲಿದೆ. ನದಿ ತಳಪಾತ್ರದ ಮುಚಳಂಬ, ಗೋರ್ಟಾ(ಬಿ), ರಾಚಪ್ಪ ಗೌಡಗಾಂವ, ಕೊಟಗೇರಾ, ಕುಟೆಗಾವ, ಲಾಧಾ, ಇಂಚೂರ, ಹೊನ್ನಳ್ಳಿ, ಮೋರಂಬಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ನದಿಗೆ ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ ಅಥವಾ ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು ಎಂದು ಕರ್ನಾಟಕ ನೀರಾವರಿ ನಿಗಮ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಕಮಲನಗರದಲ್ಲಿ ೧೯೮ ಮಿಮೀ ದಾಖಲೆ ಮಳೆ
ಕಮಲನಗರ: ಠಾಣಾಕುಶನೂರ, ಭಂಡಾರ ಕುಮಟಾ, ದಾಬಕಾ, ಮದನೂರ, ಚಾಂದುರಿ, ಖೇಡ, ಡಿಗ್ಗಿ, ಕಮಲನಗರ, ನಂದಿಬಿಜಲಗಾಂವ್, ನಾಮಾನಾಯಕ ತಾಂಡಾ, ಹಂಗರಗಾ, ಗಂಗನಬಿಡ, ಬಾವಲಗಾಂವ್ ಸೇರಿ ವಿವಿಧೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ಸೇತುವೆ, ಕೆರೆ ಒಡೆದು ಹೊಲಗಳಲ್ಲಿನ ಬೆಳೆಯೊಂದಿಗೆ ಫಲವತ್ತಾದ ಮಣ್ಣು ಸಹ ಕೊಚ್ಚಿ ಹೋಗಿದೆ. ಜ.೧ರಿಂದ ಆ.೧೮ರವರೆಗೆ ೪೯೬.೯ ಮಿಮೀ ಸರಾಸರಿಗಿಂತ ಹೆಚ್ಚು ಶೇ.೩೫ (೬೭೨.೭ ಮಿಮೀ) ದಾಖಲೆ ಮಳೆ ಸುರಿದಿದ್ದು, ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ರಾತ್ರಿ ವಾಡಿಕೆಗಿಂತ ೧೭೫.೮ ಮಿಮೀ ಅಧಿಕ ಮಳೆಯಾಗಿದ್ದು, ನಾಮಾನಾಯಕ ತಾಂಡಾ ಕೆರೆ ಒಡೆದಿದೆ. ಬಳತ-ಸಂಗಮ ಸೇತುವೆ, ಬೆಡಕುಂದಾ ಕ್ರಾಸ್-ಠಾಣಾಕುಶನೂರ ಸೇತುವೆ, ಸೋನಾಳ-ಕಮಲನಗರ ನಡುವಿನ ದೇವ ನದಿ ನಾಲಾಗೆ ಅಡ್ಡಲಾಗಿರುವ ಬಾಂದಾರ ಸೇತುವೆ, ದಾಬಕಾ-ಮುತಖೇಡ, ದಾಬಕಾ-ಖೇರ್ಡಾ, ಗಂಗನಬಿಡ-ದಾಬಕಾ, ಚಿಕಲಿ-ಗಂಗನಬಿಡ, ನಂದಿಬಿಜಲಗಾಂವ್-ಚಿಕಲಿ, ಬಸನಾಳ-ಕೊರಿಯಾಳ ಸೇತುವೆಗಳ ಮೇಲಿಂದ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ನಂದಿಬೀಜಲಗಾಂವ-ಚಿಕ್ಲಿ ಮಧ್ಯದ ಸೇತುವೆ ಕೊಚ್ಚಿ ಹೋಗಿದ್ದರಿಂದ ಹೊಲದಲ್ಲಿನ ಶೆಡ್‌ಗಳಿಗೆ ನೀರು ನುಗ್ಗಿ ಅಲ್ಲಿದ್ದ ಎಮ್ಮೆಗಳು ಸಹ ನೀರಿನಲ್ಲಿ ಹರಿದುಹೋಗಿವೆ. ವ್ಯಾಪಕ ಮಳೆಯಿಂದಾಗಿ ಹುಲುಸಾಗಿ ಬೆಳೆದಿದ್ದ ಹೆಸರು, ಉದ್ದು, ಸೋಯಾಬೀನ್, ತೊಗರಿಯೊಂದಿಗೆ ತೋಟಗಾರಿಕೆ ಬೆಳೆಗಳು ಕೈಸೇರುವುದು ಕಷ್ಟಸಾಧ್ಯ. ಕೂಡಲೇ ಸರ್ಕಾರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಡಿಸಿಗೆ ಖಂಡ್ರೆ ಸೂಚನೆ: ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ನಂದಿ ಬಿಜಲಗಾಂವ್ ಇತರೆಡೆ ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಬೆಳೆ ಹಾನಿ ಮತ್ತು ೧೫ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕೂಡಲೇ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಡಿಸಿಗೆ ಸೋಮವಾರ ಅಧಿಕೃತ ಟಿಪ್ಪಣಿ ಕಳಿಸಿರುವ ಅವರು, ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಕಡಿತಗೊಂಡಿರುವ ರಸ್ತೆ, ವಿದ್ಯುತ್ ಸಂಪರ್ಕ ಮರು ಸ್ಥಾಪನೆ ಜತೆಗೆ ತತ್‌ಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಬೇಕು. ಬೆಳೆ ಮತ್ತು ಜಾನುವಾರು ಹಾನಿ ಬಗ್ಗೆ ೨೪ ಗಂಟೆಯೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ.
ಶಾಲಾ-ಕಾಲೇಜಿಗೆ ಇಂದು ರಜೆ: ನಿರಂತರ ಮಳೆ ಹಿನ್ನೆಲೆಯಲ್ಲಿ ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಿಗೆ ತಹಸೀಲ್ದಾರಾದ ಮಹೇಶ ಪಾಟೀಲ್, ಅಮೀತ್ಕುಮಾರ ಕುಲಕರ್ಣಿ ಮಂಗಳವಾರ ರಜೆ ಘೋಷಣೆ ಮಾಡಿದ್ದಾರೆ. ಸೋಮವಾರ ರಜೆ ನೀಡಿದ್ದು, ಮಂಗಳವಾರವೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಿಸಿದ್ದಾರೆ.