ಜಿಲ್ಲೆ

ವರುಣ ಕ್ಷೇತ್ರವನ್ನು ನೆನಪಿಸಿಕೊಂಡ ವಿಜಯೇಂದ್ರ


ಮೈಸೂರು: ಹಳೇ ಮೈಸೂರು ನನಗೆ ಪಂಚಪ್ರಾಣ. ರಾಜಕಾರಣದಲ್ಲಿ ಸಾಗುತ್ತೇನೆ ಅಂದುಕೊಂಡಿರಲಿಲ್ಲ. ಆದರೆ ಕಳೆದ ಬಾರಿ ವರುಣದಲ್ಲಿ ಸ್ಪರ್ಧಿಸಲು ಬಯಸಿದೆ. ಕಾರಣಾಂತರಗಳಿಂದ ಸ್ಪರ್ಧೆ ಸಾಧ್ಯವಾಗದೆ ಇದ್ದರೂ ವರುಣದ ಮೂಲಕ ರಾಜ್ಯಕ್ಕೆ ಪರಿಚಯವಾದೆ. ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಬೆಳ್ಳಿಹಬ್ಬದ ಪ್ರಯುಕ್ತ ನಗರದ ಸುತ್ತೂರು ಮಠದಲ್ಲಿ ಭಾನುವಾರ ಹಮ್ಮಿಕೊಂಡ ಯುವ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಡಿಯೂರಪ್ಪ ಸರ್ವಜನಾಂಗದ ಧ್ವನಿಯಾಗಿದ್ದರು. ಅವರು ಬೆಂಕಿಯಲ್ಲಿ ಅರಳಿದ ಹೂವು. ನಾನು ಸಹ ಅವರ ಹಾದಿಯಲ್ಲೇ ಮುಂದುವರೆದು ಎಲ್ಲ ವರ್ಗದವರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತೇನೆ. ಯಡಿಯೂರಪ್ಪ ಮಗ ಎಂಬ ಕಾರಣಕೋಸ್ಕರ ಎಲ್ಲರು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಾರೆ. ನನ್ನ ಮೇಲೆ ನಾಡಿನ ಜನರು ಅಪಾರ ಗೌರವ ಇಟ್ಟುಕೊಂಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಚ್ಯುತಿ ಬಾರದ ಹಾಗೆ ನಡೆದುಕೊಳ್ಳುತ್ತೇನೆ ಎಂದರು.