ಜಿಲ್ಲೆ

ವರಿಷ್ಠರು ಯೋಗ್ಯ ಕ್ರಮ ಕೈಗೊಳ್ಳುತ್ತಾರೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬಿಜೆಪಿಯಲ್ಲಿನ ಗೊಂದಲವು ಪಕ್ಷದ ವರಿಷ್ಠರ ಗಮನಕ್ಕೆ ಈಗಾಗಲೇ ಬಂದಿದ್ದು, ಅವರು ಸರಿಯಾದ ಸಮಯಕ್ಕೆ ಯೋಗ್ಯ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅವರು ಬಸವಣ್ಣನವರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ನಾನು ಯಾವುದೇ ಟಿಪ್ಪಣಿ ಮಾಡುವುದಿಲ್ಲ. ರಾಜಕೀಯ ಪಕ್ಷದಲ್ಲಿ ಈ ರೀತಿಯ ಗೊಂದಲಗಳು ಇರಬಾರದು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿಯಲ್ಲಿ ಗೊಂದಲ ಬೇಗನೇ ಬಗೆಹರಿಯುತ್ತದೆ. ಕಾಂಗ್ರೆಸ್, ಬೇರೆ ಪಕ್ಷಗಳಲ್ಲಿ ಗೊಂದಲ ಕಾಯಂ ಆಗಿ ಇರುತ್ತದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿರುವ ಬಗ್ಗೆ ಕಾಂಗ್ರೆಸ್ಸಿಗರು ನೀತಿ ಆಯೋಗದ ಸಭೆಯಲ್ಲಿ, ಸಂಸತ್ ಅಧಿವೇಶನದಲ್ಲಿ ಮಾತನಾಡುವುದಿಲ್ಲ. ಸಂಸತ್ ಅಧಿವೇಶನದಲ್ಲಿ ಗದ್ದಲ-ಗಲಾಟೆ ಮಾಡಿ ಯಾವುದೇ ವಿಷಯದ ಕುರಿತು ಚರ್ಚೆ ಮಾಡಲು ಅವಕಾಶ ಕೊಡುವುದಿಲ್ಲ. ತಾವು ಮಾತನಾಡುವುದಿಲ್ಲ, ನಮಗೂ ಉತ್ತರ ಕೊಡಲು ಅವಕಾಶ ಕೊಡುವುದಿಲ್ಲ. ಹೊರಗಡೆ ರಾಜಕೀಯ ಉದ್ದೇಶದಿಂದ ಅನುದಾನ ಹಂಚಿಕೆ, ಮಹದಾಯಿ ವಿಷಯದಲ್ಲಿ ಅನ್ಯಾಯವಾಗಿದೆಯೆಂದು ಮಾತನಾಡುತ್ತಾರೆ ಎಂದು ಟೀಕಿಸಿದರು.

ಮುಡಾ, ವಾಲ್ಮೀಕಿ ಹಗರಣದಲ್ಲಿ ಲೋಕಾಯುಕ್ತ, ಇಡಿ ತನಿಖೆ ನಡೆಯುತ್ತಿದ್ದು, ಇಂದಲ್ಲ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ನಿಶ್ಚಿತ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧದ ಹಳೇ ಪ್ರಕರಣಗಳನ್ನು ಈಗ ಕೆದಕುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಸುಮ್ಮನೆ ಕುಳಿತಿದ್ದು ಯಾಕೆ ಎಂಬುದಕ್ಕೆ ಉತ್ತರ ನೀಡಬೇಕು. ರಾಜಕೀಯ ದ್ವೇಷ ಸಾಧನೆ ಹಾಗೂ ಬಿಜೆಪಿ ವಿರುದ್ಧ ಅಪ ಪ್ರಚಾರ ನಡೆಸುವ ಇಂಥ ಪ್ರಯತ್ನಗಳು ಕಾಂಗ್ರೆಸ್ಸಿಗೆ ವ್ಯತಿರಿಕ್ತ ಪರಿಣಾಣ ಉಂಟು ಮಾಡಲಿದೆ ಎಂದರು.

ಚುನಾವಣೆಯಲ್ಲಿ ಗೆದ್ದ ಕಡೆ ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಬಗ್ಗೆ ಕಾಂಗ್ರೆಸ್ಸಿಗರು ಅಪಸ್ವರ ಎತ್ತುವುದಿಲ್ಲ. ಸೋತ ಕಡೆ ದೂರುತ್ತಾರೆ. ಇವಿಎಂ ದೋಷದ ಬಗ್ಗೆ ನಿರ್ದಿಷ್ಟವಾಗಿ, ತಾಂತ್ರಿಕವಾಗಿ ಹೇಳಲಿ. ಅದು ಬಿಟ್ಟು ಸೋತಾಗ ದೂರುವುದು ಸರಿಯಲ್ಲ ಎಂದು ಹೇಳಿದರು.