ಜಿಲ್ಲೆ

ವರಿಷ್ಠರ ಸೂಚನೆಯಂತೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಅರ್ಜಿ ಸಲ್ಲಿಕೆ; ಪ್ರತಿದಿನ 300 ಕಿಮೀ ಸುತ್ತಾಟ, ಜನರ ಕಷ್ಟಗಳಿಗೆ ಸ್ಪಂದನೆ: ಕಿಮ್ಮನೆ ರತ್ನಾಕರ

ಹೊಸನಗರ: ಹೈಕಮಾಂಡ್ ಸೂಚನೆಯಂತೆ ತೀರ್ಥಹಳ್ಳಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದೇನೆ. ಸ್ಪರ್ಧೆಗೆ ಅವಕಾಶ ನೀಡುವುದು, ಬಿಡುವುದು ವರಿಷ್ಠರಿಗೆ ಬಿಟ್ಟದ್ದು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಪಕ್ಷ ಸಂಘಟನೆ ಮತ್ತು ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಕಾರಣ ಬೇಡಿಕೆಗೆ ಪಕ್ಷ ಮನ್ನಣೆ ನೀಡುವ ವಿಶ್ವಾಸ ಇದೆ. ಟಿಕೆಟ್ ಸಿಗಬಹುದು ಎಂಬ ವಿಶ್ವಾಸವಿದೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡರೂ ಜನಸೇವೆ ಕೆಲಸ ನಿಲ್ಲಿಸಿಲ್ಲ. ಪ್ರತಿದಿನ ಕ್ಷೇತ್ರದಲ್ಲಿ 300 ಕಿಮೀ ಓಡಾಡುತ್ತೇನೆ. ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಅಧಿಕಾರ ಇರದ ಕಾರಣ ಸರ್ಕಾರದ ಸವಲತ್ತು ಕೊಡಿಸಲು ಸಾಧ್ಯವಾಗದಿರಬಹುದು. ಆದರೆ ಆಗುತ್ತಿರುವ ಅನ್ಯಾಯ ದೌರ್ಜನ್ಯದ ವಿರುದ್ಧ ಜನರ ಜತೆಗಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ಏನು ಅಗತ್ಯವೋ ಅದನ್ನು ಮಾಡುತ್ತಿಲ್ಲ. ಅದು ಬಿಟ್ಟು ಜನರನ್ನು ದಿಕ್ಕುತಪ್ಪಿಸಿ ಭಾವನಾತ್ಮಕ ವಿಚಾರಗಳನ್ನು ಹರಿಬಿಟ್ಟು ರಾಜ್ಯಭಾರ ಮಾಡುತ್ತಿದೆ . ಅಡಕೆಗೆ ಎಲೆಚುಕ್ಕೆ ರೋಗ ತಗುಲಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಮುಖ್ಯಮಂತ್ರಿಗಳು ಬಂದು ಹೋದರೂ ಯಾವುದೇ ಪರಿಹಾರ ನೀಡಿಲ್ಲ. ಕರಾಳ ಕೇಂದ್ರ ಕೃಷಿ ಕಾಯ್ದೆಯನ್ನು ವಾಪಾಸು ಪಡೆಯಲು ಕೂಡ ಸಾಧ್ಯವಾಗಿಲ್ಲ. ಇದು ರೈತರ ಮೇಲಿನ ಸರ್ಕಾರದ ನಿರ್ಲಕ್ಷವನ್ನು ಎತ್ತಿತೋರಿಸುತ್ತದೆ ಎಂದು ಆರೋಪಿಸಿದರು.

ನಂದಿತಾ ಆತ್ಮಹತ್ಯೆ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ಜನರಲ್ಲಿ ಕೋಮು ಭಾವನೆ ಪ್ರಚೋದಿಸಿ ರಾಜಕೀಯ ಲಾಭ ಪಡೆದ ಗೃಹಸಚಿವ ಆರಗ ಜ್ಞಾನೇಂದ್ರರಿಗೆ ಈಗ ನಂದಿತಾ ಹೆಸರೇ ಮರೆತು ಹೋಗಿದೆ. ಅಧಿಕಾರಕ್ಕೆ ಬಂದ ಮೇಲೆ ಸಿಬಿಐ, ನ್ಯಾಯಾಂಗ ತನಿಖೆಗೆ ಒಪ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಫೆ.8ರಂದು ತೀರ್ಥಹಳ್ಳಿಯಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು, ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಅಂದು ಪಕ್ಷದ ವರೀಷ್ಠರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.