ಜಿಲ್ಲೆ

ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಮಾಡಿದ ಸಂಭ್ರಮ

ಚಿತ್ರದುರ್ಗ: ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಕೋಟೆನಗರಿ ಸೇರಿ ಜಿಲ್ಲಾದ್ಯಂತ ಗುರುವಾರದಿಂದಲೇ ಸಿದ್ಧತೆಗಳು ಭರದಿಂದ ಸಾಗಿದವು. ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಜನರು ಮುಗಿಬಿದ್ದ ದೃಶ್ಯ ಕಂಡು ಬಂದಿತು.


ದೇವಿಗೆ ಅತ್ಯಂತ ಪ್ರಿಯವಾದ ಕಮಲದ ಹೂ, ವಿವಿಧ ಪುಷ್ಪ, ಹಣ್ಣುಗಳು, ಬಾಳೆ, ಮಾವಿನ ಎಲೆ, ಬಾಳೆ ದಿಂಡು ಸೇರಿ ಪೂಜೆಗೆ ಬಳಸುವ ಸಾಮಗ್ರಿಗಳ ಖರೀದಿ ಭರಾಟೆ ನಗರದ ಆನೆಬಾಗಿಲು ಮಾರ್ಗ, ಸಂತೆಹೊಂಡ, ಗಾಂಧಿ ವೃತ್ತದ ಸಮೀಪದಲ್ಲಿ ಜೋರಾಗಿತ್ತು.


*ವಸ್ತ್ರೋದ್ಯಮಕ್ಕೂ ಬೇಡಿಕೆ: ಶ್ರಾವಣ ಮಾಸದಲ್ಲಿ ಸಾಲು-ಸಾಲು ಹಬ್ಬಗಳು ಬರುವ ಕಾರಣ ದೇವಿ ಮೂರ್ತಿಗಳಿಗೆ ಉಡಿಸುವ ಹಾಗೂ ನಾರಿಯರ ಸೀರೆಗಳಿಗೆ ಬೇಡಿಕೆ ಹೆಚ್ಚಿತ್ತು. ಗ್ರಾಮೀಣ ಭಾಗದಿಂದ ಅನೇಕರು ನಗರಕ್ಕೆ ಬಂದಿದ್ದರು. ಗ್ರಾಹಕರು ಸದಭಿರುಚಿಗೆ ತಕ್ಕಂತೆ ತಮಗಿಷ್ಟವಾದುದ್ದನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಟ್ಟೆ ಅಂಗಡಿಗಳಲ್ಲೂ ಜನಸಂದಣಿ ಕಂಡುಬಂದಿತು.


ಸಾಮಾನ್ಯವಾಗಿ ಹಬ್ಬಗಳಲ್ಲಿ ಖರೀದಿ ವೇಳೆ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣ ಆಗುವುದನ್ನು ಅರಿತ ಪೊಲೀಸರು ಸಿಗ್ನಲ್ ಸ್ಥಗಿತಗೊಳಿಸಿದ್ದರು. ಕೆಲ ಸಮಯ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಜನದಟ್ಟಣೆ ಕೂಡ ಮುಂದುವರಿಯಿತು.


*ಗಗನಕ್ಕೇರಿದ ಹಾರಗಳ ದರ: ಮನೆಗಳಲ್ಲಿ ಪ್ರತಿಷ್ಠಾಪಿಸುವ ವರಮಹಾಲಕ್ಷ್ಮೀ ಮೂರ್ತಿ, ಕಳಶದ ಹಾರ 300 ರೂ.ನಿಂದ 500 ರೂ., ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ 1 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೂ ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು. ಅದರಂತೆಯೇ ಬಹುತೇಕ ಮಾರಾಟವಾದವು.


ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಭರ್ತಿಯಾಗಿತ್ತು. ಖರೀದಿಗಾಗಿ ಬೆಳಗ್ಗೆ 11ರಿಂದ ಸಂಜೆ 4ರವರೆಗೂ ಒಳಗೆ ಪ್ರವೇಶಿಸಲು ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು. ಚಿತ್ರದುರ್ಗ ತಾಲೂಕಿನ ನೂರಾರು ಬೆಳೆಗಾರರು ಹೂವಿನ ಮೂಟೆಗಳನ್ನು ಹೊತ್ತು ತಂದಿದ್ದರು. ಮಾರುಕಟ್ಟೆಗೆ ತಂದಾಗ ವ್ಯಾಪಾರದ ಭರಾಟೆ ಜೋರಾಗಿತ್ತು.


ದೇವಿ ಮೂರ್ತಿ, ಅಲಂಕಾರಿಕ ವಸ್ತುಗಳನ್ನು ವ್ಯಾಪಾರಸ್ಥರು ಆನೆಬಾಗಿಲು ಮಾರ್ಗ ಸಮೀಪ ಅಲ್ಲಲ್ಲಿ ಮಾರಾಟ ಮಾಡುತ್ತಿದ್ದರು. ಒಂದು ತೆಂಗಿನಕಾಯಿ 20 ರೂ. ಗಳಿಂದ 30 ರೂ., ಸೇಬು, ಬಿಕ್ಕೆ, ಬಾಳೆ ಹಣ್ಣು, ಮೋಸುಂಬಿ, ದ್ರಾಕ್ಷಿ ಕ್ರಮವಾಗಿ ಕೆಜಿಗೆ 120 ರೂ., 60 ರೂ., 80ರಿಂದ 100 ರೂ., 60 ರೂ., 180 ರೂ.ನಂತೆ ಮಾರಾಟವಾಯಿತು.

ಸೇವಂತಿ ದರ ದಿಢೀರ್ ಕುಸಿತ

ಹೂವಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ಬಿಳಿ, ಕೆಂಪು, ನೇರಳೆ ಸೇರಿ ವಿವಿಧ ವರ್ಣದ ಸೇವಂತಿ 8ರಿಂದ 12 ಮಾರು, ಹಳದಿ ಸೇವಂತಿ 20 ಮಾರು ಪುಷ್ಪಕ್ಕೆ ತಲಾ 1,000 ರೂಪಾಯಿ. ಇದೇ ದರಕ್ಕೆ ಕನಕಾಂಬರ ಮತ್ತು ಕಾಕಡ 10 ಮಾರು, ವಿವಿಧ ವರ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ 300 ರೂ.ಗೆ ಮಾರಾಟವಾದವು. ಆದರೆ, ನಿರೀಕ್ಷೆಗಿಂತ ಹೆಚ್ಚಾಗಿ ಹೂವು ಬಂದಿದ್ದರಿಂದ ಬುಧವಾರಕ್ಕಿಂತ ಗುರುವಾರ ಹೂವಿನ ದರ ತುಸು ಇಳಿಕೆಯಾಗಿತ್ತು. ಹೀಗಾಗಿ ಹೂ ಬೆಳೆಗಾರರ ಮೊಗದಲ್ಲಿ ಸಂತಸ, ಬೇಸರ ಎರಡು ಕಂಡುಬಂದಿತು.