ಜಿಲ್ಲೆ

ವರಮಹಾಲಕ್ಷ್ಮೀ ಹಬ್ಬಕ್ಕೆ ಭರದ ಸಿದ್ಧತೆ

ನೆಲಮಂಗಲ: ಶ್ರಾವಣ ಮಾಸ ಬಂತೆಂದರೆ ಸಾಕು ಹಬ್ಬಗಳ ಸಾಲು ಪ್ರಾರಂಭವಾಗಲಿವೆ ಆದರೆ ಈ ಬಾರಿ ಕರೊನಾ ಭೀತಿಯ ನಡುವೆಯೂ ಈ ವರ್ಷದ ಪ್ರಮುಖ ಚೊಚ್ಚಲ ಹಬ್ಬ ವರಮಹಾಲಕ್ಷ್ಮೀ ಆಚರಣೆಗೆ ಜನ ಮುಂದಾಗಿದ್ದಾರೆ.

ನಗರದ ಚನ್ನಪ್ಪ ಬಡಾವಣೆ, ಟಿ.ಬಿ.ಸ್ಪಾಪ್, ಬಸ್ ನಿಲ್ದಾಣ, ಸಂತೆಮೈದಾನ ಪೇಟೆಬೀದಿ ಸೇರಿ ತಾಲೂಕು ಕಚೇರಿ ಪಟ್ಟಣ ಠಾಣೆವರೆಗಿನ ರಸ್ತೆಯುದ್ದಕ್ಕೂ ಹಬ್ಬದ ವಸ್ತುಗಳ ಜತೆಗೆ ನಿತ್ಯ ಬಳಕೆ ವಸ್ತುಗಳ ಅಂಗಡಿ ತೆರೆದಿದ್ದು, ಸಾರ್ವಜನಿಕರು ಪರಸ್ಪರ ಅಂತರ ಮರೆತು ಖರೀದಿಗೆ ಮುಂದಾಗಿದ್ದು ಕಂಡು ಬಂತು. ಸರ್ಕಾರ ಸೋಂಕು ನಿಯಂತ್ರಿಸಲು ಜಾರಿಗೊಳಿಸಿದ್ದ ಕೆಲ ಆದೇಶವನ್ನು ಸಾರ್ವಜನಿಕರು ದುರ್ಬಳಕೆ ಮಾಡಿಕೊಂಡಿರುವುದು ಬೇಸರದ ಸಂಗತಿ.

ಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರೆಗಿನ ಪ್ರಮುಖ ರಸ್ತೆಯಲ್ಲಿಯೇ ಹಬ್ಬದ ಅಗತ್ಯ ವಸ್ತುಗಳ ಮಾರಾಟ ಇನ್ನು ಹೆಚ್ಚಾಗಿ ವಾಹನದಟ್ಟಣೆಗೆ ಎಡೆಯಾದ್ದರಿಂದ ಸಂಚಾರಿ ಪೊಲೀಸ್ ನಿಯೋಜನೆ ಮಾಡಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಗಗನಕ್ಕೇರಿದ ಹಬ್ಬದ ವಸ್ತುಗಳ ಬೆಲೆ: ಕೆಜಿ ಸೇಬು 180, ದ್ರಾಕ್ಷಿ 200, ದಾಳಿಂಬೆ 60, ಮೂಸಂಬಿ 50, ಜೋಡಿ ಪೈನಾಪಲ್ 80, ಮರಸೇಬು 80, ಸೀಬೆಹಣ್ಣು 40, ಅಲಂಕಾರಿಕ ಕನಕಾಂಬರ ಕೆ.ಜಿಗೆ 1600, ಮಲ್ಲಿಗೆ 700, ಸೇವಂತಿಗೆ (ಮಾರೊಗೋಲ್ಡ್) 200, ಗುಲಾಬಿ 200, ಸುಗಂಧರಾಜ 180, ಬಟಾನ್ಸ್ 140 ಡೇರೆ 200ಗೆ ಏರಿಕೆಯಾಗಿದೆ.

ಒಟ್ಟಿನಲ್ಲಿ ಪಟ್ಟಣದೆಲ್ಲೆಡೆ ಮಹಿಳೆಯರು ಮಕ್ಕಳು ಕರೊನಾ ಬೀತಿಯಲ್ಲೂ ಹಬ್ಬದ ವಸ್ತುಗಳ ಖರೀದಿಯಲ್ಲಿರುವುದನ್ನು ನೋಡಿದರೆ ಹಬ್ಬ ಆಚರಣೆಯಲ್ಲಿ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ.