ಹಾಸನ: ನಗರದ ಸೇರಿ ಜಿಲ್ಲಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು ಸುಡುವ ಬಿಸಿಲು ಹಾಗು ಬೆಲೆ ಏರಿಕೆಯನ್ನು ಲೆಕ್ಕಿಸದೆ ಸಾರ್ವಜನಿಕರು ಸಾಮಾಗ್ರಿ ಖರೀದಿಯಲ್ಲಿ ತೊಡಗಿದರು.
ಸ್ವಾತಂತ್ರ್ಯ ದಿನಾಚರಣೆ ಹಾಗು ವರಮಹಾಲಕ್ಷ್ಮಿ ಹಬ್ಬ ಸರದಿಯಂತೆ ಬಂದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ವಿಶೇಷ ಪೂಜೆ ಪುನಸ್ಕಾರಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಅಗತ್ಯ ಪೂಜಾ ಸಾಮಾಗ್ರಿ, ಬಟ್ಟೆ ಖರೀದಿಯಲ್ಲಿ ಜನರು ಮುಗ್ನರಾಗಿದ್ದರು. ಗುರುವಾರ ನಗರದ ಮಾರುಕಟ್ಟೆಗಳೆಲ್ಲ ಜನರಿಂದ ತುಂಬಿ ತುಳುಕುತ್ತಿದ್ದವು. ಮಧ್ಯಾಹ್ನ 12 ರಿಂದ ಸಂಜೆ 4ರ ವರೆಗೆ ಜೋರು ನೆತ್ತಿ ಸುಡುವ ಬಿಸಿಲು ಇತ್ತಾದರೂ ಅದ್ಯಾವುದನ್ನೂ ಲೆಕ್ಕಿಸದೆ ಜನರು ದಾಂಗುಡಿ ಇಟ್ಟರು. ಇದೆಲ್ಲದರ ಜೊತೆಗೆ ಬೆಲೆ ಏರಿಕೆಯೂ ಸಾರ್ವಜನಿಕರ ಜೇಬು ಸುಡುವಂತಿತ್ತು.
ಗಗನಕ್ಕೇರಿದ ಬೆಲೆ:
ನಗರದ ಕಟ್ಟಿನಕೆರೆ ಮಾರುಕಟ್ಟೆ, ಕಸ್ತೂರ ಬಾ ರಸ್ತೆಗಳಲ್ಲಿ ವಿವಿಧ ಪದಾರ್ಥಗಳ ಮಾರಾಟ ಮಾಡಲಾಯಿತು. ಅಗತ್ಯ ವಸ್ತುಗಳ ಬೆಲೆ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ಪೈನಾಪಲ್ ಎರಡಕ್ಕೆ 100 ರೂ., ಮೂಸುಂಬೆ ಕೆ.ಜಿ.ಗೆ 50 ರೂ., ಬಾಳೆಹಣ್ಣು ಕೆ.ಜಿ.ಗೆ 140 ರೂ., ಸೇಬು 250 ರೂ., ದ್ರಾಕ್ಷಿ 200 ರೂ., ಸಪೋಟ 160 ರೂ., ದಾಳಿಂಬೆ 200 ರೂ., ಸೇವಂತಿಗೆ ಹೂವು ಒಂದು ಮಾರಿಗೆ 130, ತಾವರೆ ಹೂವು ಜೊತೆಗೆ 120 ರೂ., ಮಲ್ಲಿಗೆ 200 ರೂ., ಕಾಕಡ 150 ರೂ., ಚಂಡು ಹೂವು 50-80 ರೂ., ಬಾಳೆಕಂದು ಜೊತೆಗೆ 50 ರೂ., ಮಾವಿನ ತೋರಣ ಒಂದು ಕಟ್ಟಿಗೆ 20 ರೂ., ಕಬ್ಬು ಒಂದು ಜೊತೆಗೆ 40 ರೂ., ವರೆಗೆ ಮಾರಾಟವಾಯಿತು. ನಗರದ ಸ್ಲೇಟರ್ಸ್ ಹಾಲ್, ಮಹಾವೀರ ವೃತ್ತ, ಡೇರಿ ವೃತ್ತ, ಸಂತೆಪೇಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ಸಂಚಾರ ದಟ್ಟಣೆ:
ಹಬ್ಬದ ನಿಮಿತ್ತ ಜನಜಂಗುಳಿ ಹೆಚ್ಚಾದ ಪರಿಣಾಮ ಮಾರುಕಟ್ಟೆಗಳಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು. ಮೊದಲೆಲ್ಲ ಮಹಾವೀರ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರ ನಿಷೇಧಿಸಲಾಗುತ್ತಿತ್ತು. ಈ ಬಾರಿ ಸ್ಥಳದಲ್ಲಿ ಸಂಚಾರ ಪೊಲೀಸರು ಇಲ್ಲದ ಕಾರಣಕ್ಕೆ ಬೈಕ್, ಆಟೋಗಳು ಮನಬಂದಂತೆ ಓಡಾಡಿದರ ಪರಿಣಾಮ ಗ್ರಾಹಕರಿಗೆ ಕಿರಿಕಿರಿಯಾಯಿತು. ಏಕಮುಖ ಸಂಚಾರ ದ್ವಿಪಥ ರಸ್ತೆಯಾಗಿ ಮಾರ್ಪಟ್ಟಿತು.