ಜಿಲ್ಲೆ

ವರನಟ ರಾಜ್ ಜಯಂತ್ಯುತ್ಸವದಲ್ಲಿ ಹಾಡು ಹಾಡಿದ ಡಿಸಿ

ಚಿಕ್ಕಬಳ್ಳಾಪುರ: ವರನಟ ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ನಟಿಸದೇ ಇರುವ ಪಾತ್ರವೇ ಇಲ್ಲ. ಅವರು ಕನ್ನಡದ ಆಸ್ತಿ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಣ್ಣಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಸಾಹಿತ್ಯ ಪರಿಷತ್, ವಾರ್ತಾ ಹಾಗೂ  ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ್ದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸತ ಡಾ.ರಾಜ್ ಕುಮಾರ್ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಡಾ.ರಾಜ್ ಕುಮಾರ್ ಕನ್ನಡದ ದೊಡ್ಡ ಶಕ್ತಿ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸೇರಿದಂತೆ ಬಹುತೇಕ ಎಲ್ಲ ಪಾತ್ರಗಳನ್ನು ಸಿನಿಮಾಗಳಲ್ಲಿ ಮನಮೋಹಕವಾಗಿ ನಿರ್ವಹಿಸಿ, ಸಮಾಜಕ್ಕೆ ಅತ್ಯುತ್ತಮ ಸಂದೇಶಗಳನ್ನು ನೀಡಿದವರು. ಗೋಕಾಕ್ ಚಳುವಳಿಗೆ ಧುಮುಕಿದ ಪರಿಣಾಮ ಚಳವಳಿಗೆ ಹೊಸ ಶಕ್ತಿ ಬಂದಿತ್ತು. ಕೇವಲ ನಟನೆ ಕೌಶಲ ಮಾತ್ರವಲ್ಲದೇ ನಿರಂತರವಾಗಿ ನಾಡು ನುಡಿ ಹೋರಾಟಗಳಲ್ಲಿ ಭಾಗವಹಿಸಿ, ಕನ್ನಡಿಗರನ್ನು ಪ್ರೇರೇಪಿಸುತ್ತಿದ್ದರು ಎಂದರು. ಇದೇ ವೇಳೆ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಸಿನಿಮಾದ ನಾವಾಡುವ ನುಡಿಯೇ ಕನ್ನಡ ನುಡಿ ಹಾಡನ್ನು ಹಾಡುವ ಮೂಲಕ ಗಮನ ಸೆಳೆದರು.
ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ  ಮಹೇಶ್, ನಗರಸಭೆ ಸದಸ್ಯೆ ಅಣ್ಣಯ್ಯಮ್ಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಮತ್ತಿತರರು ಇದ್ದರು.  

*ಸನ್ಮಾನ, ನಮನ
ಡಾ. ರಾಜಕುಮಾರ್ ಅನೇಕ ಚಿತ್ರಾವಳಿಗಳನ್ನು ಸೆರೆ ಹಿಡಿದು ಸಂಗ್ರಹಿಸಿರುವ ಹಿರಿಯ ಛಾಯಾಚಿತ್ರ ಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್ ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವರನಟ ಭಾವಚಿತ್ರಕ್ಕೆ ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಅಧಿಕಾರಿಗಳು ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.