ದಾವಣಗೆರೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಬಗ್ಗೆ ಹರಿಹರ ಶಾಸಕ ಬಿ.ಪಿ. ಹರೀಶ್ ಅವಹೇಳನಕಾರಿಯಾಗಿ ಮಾತನಾಡಿದ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಆಯೋಗವು ಪೂರ್ವ ವಲಯ ಐಜಿಪಿ ಅವರಿಂದ ವರದಿ ಕೇಳಿದೆ. ಐಜಿಪಿಗೆ ಪತ್ರ ಬರೆದಿರುವ ಆಯೋಗವು, ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕೈಗೊಂಡ ಕ್ರಮದ ಬಗ್ಗೆ ಶೀಘ್ರವೇ ವರದಿ ಸಲ್ಲಿಸುವಂತೆ ತಿಳಿಸಿದೆ. ಮಹಿಳಾ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿ ಅಪಮಾನಿಸಿರುವುದನ್ನು ಆಯೋಗವು ತೀವ್ರವಾಗಿ ಖಂಡಿಸಿ, ಗಂಭೀರವೆಂದು ಪರಿಗಣಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಹರೀಶ್ ಇತ್ತೀಚೆಗೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಪಿ ಅವರನ್ನು ಶ್ವಾನಕ್ಕೆ ಹೋಲಿಕೆ ಮಾಡಿದ್ದರು. ...